ಅರ್ಧ ಬೆಲೆಗೆ ಸ್ಕೂಟರ್.. ಲ್ಯಾಪ್ ಟಾಪ್, ಗೃಹಪಯೋಗಿ ವಸ್ತುಗಳು ಸಿಗುತ್ತವೆ ಎಂದರೆ ಯಾರು ಬೇಡ ಅಂತಾರೆ. ಆದರೆ ಇದನ್ನೇ ಅಸ್ತ್ರವಾಗಿಟ್ಟುಕೊಂಡು 26 ವರ್ಷದ ಯುವಕನೊಬ್ಬ 40,000 ಜನರಿಗೆ ವಂಚಿಸಿದ್ದಾರೆ.
ಹೌದು, ಕೇರಳ ಇತಿಹಾಸದಲ್ಲೇ ಅತೀ ದೊಡ್ಡ ವಂಚನೆ ಪ್ರಕರಣ ಎಂದು ಹೇಳಲಾಗಿದ್ದು, 40 ಸಾವಿರಿಂದ ಸುಮಾರು 1000 ಕೋಟಿ ರೂ. ವಂಚಿಸಿದ್ದಾನೆ. ಹಲವಾರು ವರ್ಷಗಳಿಂದ ವಂಚಿಸುತ್ತಾ ಬಂದಿರುವ ಈತನ ಅರ್ಧ ಬೆಲೆಗೆ ಉಡುಗೊರೆ ಎಂಬ ಆಮೀಷ ಈಗ ಭಾರೀ ಸಂಚಲನ ಸೃಷ್ಟಿಸಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ಅನಂತು ಕೃಷ್ಣನ್ ಎಂಬ 26 ವರ್ಷದ ಯುವಕ, ವಿವಿಧ ಕಂಪನಿಗಳು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ ಆರ್) ನಿಧಿಯಿಂದ ಅರ್ಧ ಬೆಲೆಗೆ ಉಡುಗೊರೆ ರೂಪದಲ್ಲಿ ದಿನ ಬಳಕೆಯ ವಸ್ತುಗಳನ್ನು ನೀಡುವುದಾಗಿ ನಂಬಿಸಿ ವಂಚಿಸಿದ್ದಾನೆ.
ನಿವೃತ್ತ ನ್ಯಾಯಮೂರ್ತಿಗಳು, ಸ್ವಯಂ ಸೇವಾ ಸಂಘಗಳು, ರಾಜಕೀಯ ಮುಖಂಡರು ಸೇರಿದಂತೆ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಕೂಡ ಈತನ ಬಲೆಗೆ ಬಿದ್ದಿದ್ದಾರೆ ಎಂದರೆ ಈತನ ಚಾಣಕ್ಷತನ ಗಮನಿಸಬೇಕು.
ಈತನ ವಿರುದ್ಧ 6000 ದೂರುಗಳು ದಾಖಲಾಗಿದ್ದು, ಕೇರಳದೆಲ್ಲೆಡೆ ಈತನ ವಂಚನೆ ಜಾಲ ಹಬ್ಬಿದ್ದು, ಕೇರಳ ಕ್ರೈಂ ಬ್ರಾಂಚ್ ಆಫ್ ಪೊಲೀಸರು ಅಲ್ಲದೇ ಜಾರಿ ನಿರ್ದೇಶನಾಲಯ ಕೂಡ ತನಿಖೆಗೆ ಇಳಿಯಬೇಕಾಗಿದೆ ಎಂದರೆ ಈತನ ಹಗರಣ ವ್ಯಾಪ್ತಿ ಎಷ್ಟಿರಬೇಕು ಎಂಬುದು ಊಹಿಸಿ.
1 ಲಕ್ಷ ರೂ. ಮೌಲ್ಯದ ಹೊಸ ಸ್ಕೂಟರ್ ಅನ್ನು ಅರ್ಧ ಬೆಲೆಗೆ ನೀಡಲಾಗುತ್ತದೆ. ನೋಂದಣಿಗೆ 320 ರೂ. ಕೊಡಬೇಕು ಎಂದು ಹೇಳಲಾಗಿತ್ತು. ಅರ್ಧ ಬೆಲೆಗೆ ಸ್ಕೂಟರ್ ಸಿಗುವಾಗ 320 ರೂ. ನೋಂದಣಿ ಶುಲ್ಕ ನೀಡುವುದು ಹೊರೆಯಲ್ಲ ಎಂದು ಭಾವಿಸಿ ಒಬ್ಬರು ಇನ್ನೊಬ್ಬರನ್ನು ಪರಿಚಯಿಸುತ್ತಾ ಸಾವಿರಾರು ಮಂದಿ ನೋಂದಣಿ ಮಾಡಿಕೊಂಡರು.
ಕೆಲವು ತಿಂಗಳ ನಂತರ ಸಣ್ಣ ಸಮಾರಂಭ ಮಾಡಿ ಕೆಲವರಿಗೆ ಮಿಕ್ಸಿ, ಗ್ರೈಂಡರ್, ಹೊಲಿಗೆ ಯಂತ್ರ ನೀಡುವ ಮೂಲಕ ನಂಬಿಕೆ ಗಳಿಸುವ ಪ್ರಯತ್ನ ನಡೆಯಿತು. ಈ ಸಮಾರಂಭ ನೋಡಿ ನಂಬಿದ ಮತ್ತಷ್ಟು ಜನ ನೋಂದಣಿ ಶುಲ್ಕದ ಜೊತೆ ಅರ್ಧ ಮೊತ್ತವನ್ನೂ ನೀಡಿದರು. ಕೆಲಸದ ಅವಧಿಯ 100 ದಿನಗಳಲ್ಲಿ ನಿಮ್ಮ ಬೇಡಿಕೆಯ ವಸ್ತು ಸಿಗುತ್ತದೆ ಎಂದು ನಂಬಿಸಿ ವಂಚಿಸಲಾಗಿತ್ತು.