ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ ಯೋಧರೊಬ್ಬರು ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಮೃತ ಯೋಧನನ್ನು ಬೆಳಗಾವಿ ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ.
ಅವರು ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದು ಅವರ ತಲೆಗೆ ತಗುಲಿ ಅಸು ನೀಗಿದ್ದಾರೆ. ಸಾಯುವುದಕ್ಕೂ ಒಂದು ಗಂಟೆ ಮೊದಲು ತಾಯಿಯ ಜೊತೆ ಅವರು ಮಾತನಾಡಿದ್ದರು.
2020ರಲ್ಲಿ ಪ್ರವೀಣ್ ಸುಭಾಷ್ ಖಾನಗೌಡರ ನೌಕಾಪಡೆಗೆ ಸೇರಿದ್ದರು. ಸೇವೆಗೆ ಸೇರಿದ್ದ ಫೆ.೧೨ರಂದೇ ಈ ದುರಂತ ಸಂಭವಿಸಿದೆ. ಕಲ್ಲೋಳಿಗೆ ಪಾರ್ಥಿವ ಶರೀರ ತಲುಪಿದ್ದು, ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಿದ್ದು, ಇಂದು (ಫೆ.14) ಸರ್ಕಾರಿ ಗೌರವಗಳೊಂದಿಗೆ ಪಂಚಾಯ್ತಿ ಕಚೇರಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.