ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ಮಂಡಿಸಲಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಹಾಗೂ ಆಡಳಿತಾರೂಢ ಎನ್ ಡಿಎ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಸೃಷ್ಟಿಯಾಯಿತು.
ವಕ್ಫ್ ಆಸ್ತಿಯನ್ನು ನಿಯಮಬದ್ಧಗೊಳಿಸುವ ಕುರಿತ ವಕ್ಫ್ ತಿದ್ದುಪಡಿ ಮಸೂದೆ ೨೦೨೪ ಅನ್ನು ಗುರುವಾರ ಮಂಡಿಸಲಾಯಿತು. ಆದರೆ ಸಂಸದೀಯ ಸಮಿತಿಯಲ್ಲಿ ಪ್ರತಿಪಕ್ಷಗಳು ನೀಡಿದ್ದ ಪ್ರಮುಖ ಸಲಹೆಗಳನ್ನು ತೆಗೆದುಹಾಕಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಈ ರೀತಿಯ ಮಸೂದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದವು.
ಲೋಕಸಭೆಯಲ್ಲಿ ಜಂಟಿ ಸದನ ಸಮಿತಿ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ವಕ್ಫ್ ಮಸೂದೆಯನ್ನು ಮಂಡಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.
ಆಡಳಿತಾರೂಢ ಪಕ್ಷದ ಸದಸ್ಯರ ಘೋಷಣೆಗೆ ಕಿವಿಗೊಡದ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದಾಗ ಸದನದಲ್ಲಿ ಏನೂ ಕೇಳದಷ್ಟು ಗದ್ಧಲ ಉಂಟಾಯಿತು. ಇದರ ನಡುವೆ ಸ್ವಲ್ಪಮಟ್ಟಿಗೆ ಕೋಲಾಹಲ ಕಡಿಮೆ ಆದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳ ಸಲಹೆಗಳನ್ನು ಸೇರಿಸಲು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿ ಸಮಾಧಾನಪಡಿಸಲು ಯತ್ನಿಸಿದರು.
ನಮ್ಮ ಸಲಹೆಗಳನ್ನು ಜಂಟಿ ಸದನ ಸಮಿತಿ ಸ್ವೀಕರಿಸದೇ ಕಡತದಿಂದಲೇ ತೆಗೆದುಹಾಕಿದೆ. ನಿಮಗೆ ಇಷ್ಟ ಬಂದಂತೆ ಮಾಡುವುದಾದರೆ ಪ್ರತಿಪಕ್ಷ ಸದಸ್ಯರನ್ನು ಸಮಿತಿಯಲ್ಲಿ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಪ್ರತಿಪಕ್ಷ ಸಂಸದರೊಬ್ಬರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಮಿತ್ ಶಾ, ನಾವು ಪ್ರತಿಪಕ್ಷ ಸದಸ್ಯರ ಸಲಹೆಯನ್ನು ಪರಿಗಣಿಸುತ್ತೇವೆ. ನಿಮ್ಮ ಸಲಹೆಗಳನ್ನು ಕಡತದಲ್ಲಿ ತೆಗೆದುಹಾಕಿದ್ದರೆ ಸೇರಿಸಲಾಗುವುದು ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ನಕಲಿ ವರದಿ, ಬುಲ್ಡೋಜರ್ ಸಂಸ್ಕೃತಿಯ ವರದಿ ಇಂತಹ ವರದಿಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಗುಡುಗಿದರು.
ಹಲವಾರು ಪ್ರತಿಪಕ್ಷ ಸದಸ್ಯರು ಸಲಹೆಗಳನ್ನು ನೀಡಿದ್ದಾರೆ. ಅದನ್ನು ದಾಖಲೆಯಿಂದ ತೆಗೆದುಹಾಕುವುದು ಬುಲ್ಡೋಜರ್ ಸಂಸ್ಕೃತಿಯ ಲಕ್ಷಣ. ಇದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಇದನ್ನು ವಾಪಸ್ ಪಡೆದು, ಪ್ರತಿಪಕ್ಷ ಸದಸ್ಯರ ಸಲಹೆಗಳನ್ನು ಸೇರಿಸಿ ಮರಳಿ ಮಂಡಿಸಬೇಕು ಎಂದು ಖರ್ಗೆ ಆಗ್ರಹಿಸಿದರು.