ದೆಹಲಿಯಲ್ಲಿ ಭರ್ಜರಿ ಗೆಲುವಿನೊಂದಿಗೆ 2 ದಶಕದ ನಂತರ ಅಧಿಕಾರ ಹಿಡಿದಿರುವ ಬಿಜೆಪಿ ಮಹಿಳಾ ಸಿಎಂ ನೇಮಕ ಮಾಡಲು ಚಿಂತನೆ ನಡೆಸಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 48ರಲ್ಲಿ ಗೆಲುವು ಸಾಧಿಸಿದ ಬಿಜೆಪಿ 27 ವರ್ಷದ ನಂತರ ಅಧಿಕಾರದ ಗದ್ದುಗೆ ಹಿಡಿದಿದೆ. ಇದರಿಂದ 10 ವರ್ಷಗಳ ಆಮ್ ಆದ್ಮಿ ಪಕ್ಷದ ಆಡಳಿತಕ್ಕೆ ತೆರೆಬಿದ್ದಿದೆ.
ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಹಲವಾರು ಹೆಸರುಗಳು ಚಾಲ್ತಿಗೆ ಬಂದಿವೆ. ಅದರಲ್ಲೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೆಶ್ ವರ್ಮಾ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು.
ಪಶ್ಚಿಮ ದೆಹಲಿಯ 2 ಬಾರಿಯ ಸಂಸದ ಪರ್ವೆಶ್ ವರ್ಮಾ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರರೂ ಆಗಿದ್ದಾರೆ. ಹಾಗಾಗಿ ಪರ್ವೆಶ್ ಮುಂದಿನ ಸಿಎಂ ರೇಸ್ ನಲ್ಲಿ ಮಂಚೂಣಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಇದೇ ವೇಳೆ ಸತೀಶ್ ಉಪಾಧ್ಯಾಯ, ಪಕ್ಷದ ಹಿರಿಯ ನಾಯಕ ವಿಜೇಂದರ್ ಗುಪ್ತ, ಆಶಿಶ್ ಸೂದ್, ಪವನ್ ಶರ್ಮ ಮುಂತಾದವರ ಹೆಸರು ಕೂಡ ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು.
ಆದರೆ ಹೊಸ ಬೆಳವಣಿಗೆ ಪ್ರಕಾರ ಬಿಜೆಪಿ ವರಿಷ್ಠರು ಮಹಿಳಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಮನಸ್ಸು ಮಾಡಿದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ನಾಲ್ವರು ಮಹಿಳೆಯರ ಹೆಸರು ಚಾಲ್ತಿಗೆ ಬಂದಿದೆ.
ನೀಲಮ್ ಪಹಲ್ವಾನ್, ರೇಖಾ ಗುಪ್ತಾ, ಪೂನಮ್ ಶರ್ಮ ಮತ್ತು ಶಿಖಾ ರಾಯ್ ಮುಖ್ಯಮಂತ್ರಿ ರೇಸ್ ನಲ್ಲಿರುವ ಪ್ರಮುಖ ಮಹಿಳಾ ಶಾಸಕಿಯರಾಗಿದ್ದಾರೆ. ಪೂನಮ್ ಶರ್ಮ ಆಪ್ ನ ಮಾಜಿ ಸಚಿವ ಸೌರಭ್ ಭಾರಧ್ವಾಜ್ ವಿರುದ್ಧ ಗೆಲುವು ಸಾಧಿಸಿದ್ದರು.
ಇದೇ ವೇಳೆ ಬಿಜೆಪಿ ಜಾತಿ ಲೆಕ್ಕಾಚಾರ ಕೂಡ ಮಾಡುತ್ತಿದ್ದು, ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಮುಖಂಡರು ಹಾಗೂ ಮಹಿಳಾ ಶಾಸಕಿಯರು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಚರ್ಚೆ ನಡೆಸುತ್ತಿದ್ದು, ಸದ್ಯಕ್ಕೆ ಸಿಎಂ ಆಯ್ಕೆ ಕಸರತ್ತು ಒಂದು ವಾರ ಕಾಲ ನಡೆಯಲಿದೆ ಎಂದು ಹೇಳಲಾಗಿದೆ.