Menu

ಬೆಂಗಳೂರಿಗೆ ಹೆಚ್ಚುವರಿ 6 ಟಿಎಂಸಿ ನೀರು ಕೊಟ್ಟು ಇತಿಹಾಸ ಬರೆದಿದ್ದೇನೆ: ಡಿಕೆ ಶಿವಕುಮಾರ್

ನಾನು ಸಚಿವನಾದ ಬಳಿಕ ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಆ ಮೂಲಕ ಬೆಂಗಳೂರಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕನಕಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ದಳದ ಸರ್ಕಾರಗಳು ಈ ತೀರ್ಮಾನ ಮಾಡಿರಲಿಲ್ಲ. ನಿಂತುಹೋಗಿದ್ದ 5ನೇ ಹಂತದ ಯೋಜನೆಗೆ ಮತ್ತೆ ಚಾಲನೆ ನೀಡಿ ತೊರೆಕಾಡನಹಳ್ಳಿಯಿಂದ ನೀರು ತರಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದೆ ಎಂದರು.

ಎತ್ತಿನಹೊಳೆಯಿಂದ ನೀರನ್ನು ಆಚೆಗೆ ತಂದಿದ್ದೇನೆ. ಈ ವರ್ಷದ ಕೊನೆ ವೇಳೆಗೆ ತುಮಕೂರಿನವರೆಗೂ ಎತ್ತಿನಹೊಳೆ ನೀರನ್ನು ಹರಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಟೀಕೆ ಟಿಪ್ಪಣಿ ಮಾಡಿದರು. ಮೋದಿ ಅವರ ಕೈ ಹಿಡಿದು ಈ ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು, ಆದರೂ ಈವರೆಗೂ ಯಾಕೆ ಸಹಿ ಹಾಕಿಸಿಲ್ಲ? ಎಂದು ಅವರು ಪ್ರಶ್ನಿಸಿದರು.

ಕೇವಲ ಪ್ರಚಾರಕ್ಕೆ ಮಾತನಾಡುವುದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಅನುಭವ ಹಾಗೂ ಹಿರಿತನಕ್ಕೆ ನಾವು ಗೌರವಿಸುತ್ತೇವೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಸಮೀಕ್ಷೆ ಮಾಡಿ ವಿಮಾನ ನಿಲ್ದಾಣ ಜಾಗ ತೀರ್ಮಾನ

2ನೇ ಏರ್ರ್ಪೋರ್ಟ್ ಸ್ಥಳದ ಚರ್ಚೆ ಬಗ್ಗೆ ಕೇಳಿದಾಗ, “ವಿಮಾನ ನಿಲ್ದಾಣ ನಿರ್ಮಾಣದ ಜಾಗ ನಿಗದಿ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ನಾವು ಸಲಹೆ ನೀಡಬಹುದು, ಅಂತಿಮವಾಗಿ ವಿಮಾನಯಾನ ಪ್ರಾಧಿಕಾರ ತೀರ್ಮಾನ ಮಾಡುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಾಗ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 2034ರವರೆಗೂ ನಾವು ಮತ್ತೊಂದು ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ಸಾಧ್ಯವಿಲ್ಲ. ಆದರೆ ನಾವು ಸಿದ್ಧತೆ ಮಾಡಿಕೊಳ್ಳಬಹುದು. ಈ ಸಿದ್ಧತೆಗಾಗಿ 3-4 ಜಾಗಗಳ ಪ್ರಸ್ತಾವನೆ ನೀಡಿದ್ದೇವೆ. ದಕ್ಷಿಣ, ಉತ್ತರ ಪೂರ್ವ ಭಾಗದಲ್ಲಿ ಸಲಹೆ ನೀಡಿದ್ದೇವೆ. ವಿಮಾನ  ನಿಲ್ದಾಣ ತಾಂತ್ರಿಕ ವಿಚಾರವಾಗಿದ್ದು, ಸಮೀಕ್ಷೆ ಮಾಡಿ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ಗ್ಯಾರಂಟಿ ಹೊರೆಯಲ್ಲ, ಜನರ ಶಕ್ತಿ:

ಗ್ಯಾರಂಟಿ ಹೊರೆ ಮಧ್ಯೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದೆ ಎಂದು ಕೇಳಿದಾಗ, “ಗ್ಯಾರಂಟಿ ಯೋಜನೆಗಳು ಆರ್ಥಿಕ ಹೊರೆ ಎಂದು ಹೇಳಿದ್ದು ಯಾರು? ಇದು ಜನರ ಬದುಕಿಗೆ ಸರ್ಕಾರ ಕೊಟ್ಟಿರುವ ಶಕ್ತಿ. ಜನರ ಆರ್ಥಿಕ ಹೊರೆ ತಪ್ಪಿಸಲು ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ  ಎಂದು ಡಿಕೆ ಶಿವಕುಮಾರ್ ನುಡಿದರು.

ಎಲ್ಲಾ ವರ್ಗದವರಿಗೂ ಆರ್ಥಿಕ ಶಕ್ತಿ ತುಂಬಲು ಪ್ರತಿ ಕ್ಷೇತ್ರಕ್ಕೆ ₹ 250 ಕೋಟಿಯಷ್ಟು ಹಣ ನೀಡಲಾಗುತ್ತಿದೆ. ಈ ಯೋಜನೆಗಳಿಗಾಗಿ ₹ 56 ಸಾವಿರ ಕೋಟಿ ಹಣ ನೀಡಲಾಗಿದ್ದು, ಈ ಯೋಜನೆ ಜನರಿಗಾಗಿ ಮಾಡಲಾಗಿದೆ. ಜೀವ ಇದ್ದರೆ ಜೀವನ. ನಮ್ಮ ಸರ್ಕಾರ ಹಸಿದವರು, ಬಡವರ ಬಗ್ಗೆ ಆಲೋಚಿಸಿ ಈ ಕಾರ್ಯಕ್ರಮ ರೂಪಿಸಿದೆ ಎಂದು ಅವರು ವಿವರಿಸಿದರು.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2-3 ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು. ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಖಾಲಿ ಬುಟ್ಟಿ. ದೇವೇಗೌಡರು, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಂತ್ರಿಗಳು, ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಆದರೂ ಮಾತು ಮಾತ್ರ ದೊಡ್ಡದಾಗಿ ಆಡುತ್ತಾರೆ. ನಮ್ಮನ್ನು ಟೀಕಿಸಿದರೆ ಅವರಿಗೆ ಆನಂದ. ನಮ್ಮನ್ನು ಟೀಕಿಸಿಯಾದರೂ ಅವರು ಸಂತೋಷ ಪಡುತ್ತಾರಲ್ಲ ಅದೇ ನಮಗೆ ತೃಪ್ತಿ ಎಂದು ತಿಳಿಸಿದರು.

ಸಿಬಿಐ ತನಿಖೆಗೆ ಯಾಕೆ ನೀಡಬೇಕು?

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ಹೈಕೋರ್ಟ್ ಇಂದು ತೀರ್ಪು ನೀಡಲಿರುವ ಬಗ್ಗೆ ಕೇಳಿದಾಗ, “ಯಾವ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬೇಕು? ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ, ಇಡಿ ಕೂಡ ತನಿಖೆ ಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಮೂರನೇ ಸಂಸ್ಥೆ ತನಿಖೆ ಮಾಡಲು ಯಾಕೆ ನೀಡುತ್ತಾರೆ? ಈ ರೀತಿ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಅನೇಕ ನ್ಯಾಯಾಲಯದ ತೀರ್ಪುಗಳಿವೆ. ನನ್ನ ವಿರುದ್ಧವೂ ಇದೇ ರೀತಿ ಕೇಸ್ ದಾಖಲಿಸಿರುವುದರ ವಿರುದ್ಧ ನಾನು ಬಡಿದಾಡುತ್ತಿದ್ದೇನೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *