ಆರ್‌ಬಿಐ ಮಾನಿಟರಿ ಪಾಲಿಸಿ ಕಮಿಟಿ ರೆಪೋದರವನ್ನು 0.25 ಪ್ರತಿಶತ ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಎಂಪಿಸಿ ಸಭೆಯ ಬಳಿಕ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಶೇ. 6.50ರಷ್ಟಿದ್ದ ಬಡ್ಡಿದರವನ್ನು ಶೇ. 6.25ಕ್ಕೆ ಇಳಿಸಲಾಗಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್ಬಿಐನ ರೆಪೋ ದರ ಇಳಿಕೆ ಆಗಿದೆ.
ಈ ಬಾರಿ 25 ಮೂಲಾಂಕಗಳಷ್ಟು ಇಳಿಕೆ ಆಗುತ್ತದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು. ಹಣದುಬ್ಬರ ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ಹಣಕಾಸು ನೀತಿ ಸಮಿತಿಯು ರೆಪೋ ದರ ಇಳಿಸುವ ಸವಾಲು ತೆಗೆದುಕೊಂಡಿದೆ. ಬ್ಯಾಂಕುಗಳ ಸಾಲದ ಬಡ್ಡಿ ದರಗಳು ಕಡಿಮೆಗೊಳ್ಳುವ ಸಾಧ್ಯತೆ ಇದ್ದು, ಸಾಲದ ಇಎಂಐ ಮೊತ್ತ ಕೊಂಚ ಕಡಿಮೆ ಆಗಬಹುದು.
ಎರಡು ವರ್ಷದಿಂದ ರೆಪೋ ದರ ಶೇ. 6.50ರಲ್ಲೇ ಇತ್ತು. 2020ರ ಮೇ ಬಳಿಕ ಆರ್‌ಬಿಐ ದರಗಳನ್ನು ಇಳಿಸಿದ್ದೇ ಇಲ್ಲ. ನಾಲ್ಕರಿಂದ ಐದು ವರ್ಷದ ಬಳಿಕ ಆರ್‌ಬಿಐ ಮೊದಲ ಬಾರಿಗೆ ರೆಪೋ ದರ ಇಳಿಸಿದಂತಾಗಿದೆ.