ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತನಾಗನಹಳ್ಳಿಯಲ್ಲಿ 71.39 ಎಕರೆ ಗೋಮಾಳ ಜಮೀನನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಸಾವಿತ್ರಮ್ಮ, ಮಂಜುನಾಥ, ಡಿ.ಸಿ.ತಮ್ಮಣ್ಣ ಹಾಗೂ ಕುಟುಂಬದವರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಹೇಳಿದರು
ನಗರದ ಮೀಡಿಯಾ ಕ್ಲಬ್ ನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಕುರಿತು ಹೈಕೋರ್ಟ್ ನಲ್ಲಿ ಸಿವಿಲ್ ದಾವೆಯನ್ನೂ ಹಾಕಲಾಗಿದೆ. ಕಾಂಗ್ರೆಸ್ ಸರಕಾರ, ಹೈಕೋರ್ಟ್ನೊಂದಿಗೆ ಸಹಕರಿಸಿ ಅತಿಕ್ರಮಣ ಮಾಡಿಕೊಂಡಿರುವ ಭೂ ಕಬಳಿಕೆ ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮೂರು ಕರಾಳ ಕಾಯ್ದೆ ವಾಪಾಸ್ ಪಡೆಯುವೆವು ಎಂದು ಪ್ರಣಾಳಿಕೆಯಲ್ಲಿಯೇ ಹೇಳಿರುವ ರಾಜ್ಯ ಕಾಂಗ್ರೆಸ್ ಸರಕಾರ ಈ ವರೆಗೂ ಕಾಯ್ದೆ ವಾಪಾಸ್ ಪಡೆದಿಲ್ಲ. ಇವರಿಗೆ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ. ಹೀಗೆ ಮುಂದುವರೆದರೆ ಹೋರಾಟ ಆರಂಭಿಸಬೇಕಾಗುತ್ತದೆ. ಮೋದಿ ಸರಕಾರ ಮೂರು ಕಾಯ್ದೆಗಳ ಜಾರಿ ಮಾಡಿತ್ತು. ನೂರಾರು ದಿನಗಳ ಕಾಲ ರೈತರು ಹೋರಾಟ ಆರಂಭಿಸಿದರು. ಕೊನೆಗೆ ಅವರೇ ಕಾಯ್ದೆ ವಾಪಾಸ್ ಪಡೆದರು ಎಂದರು.
ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಎಂದಿದ್ದ ಬಿಜೆಪಿಯವರು ಈ ಕಾಯ್ದೆ ವಾಪಾಸ್ ಪಡೆಯಲಿಲ್ಲ. ಕಾಂಗ್ರೆಸ್ ಪಕ್ಷ ಸ್ವತಃ ತನ್ನ ಪ್ರಣಾಳಿಕೆಯಲ್ಲೇ ಹೇಳಿಕೊಂಡಿದೆ. ಮೂರು ಕರಾಳ ಕಾಯ್ದೆ ವಾಪಾಸ್ ಪಡೆಯುವೆವು ಎಂದಿದೆ. ಆದರೆ ಅವರು ಈ ವರೆಗೂ ಕಾಯ್ದೆ ವಾಪಾಸ್ ಪಡೆದಿಲ್ಲ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮಗೆ ಬಿಟ್ಟು ಹೋಗಿದ್ದಾರೆ. ಆದರೆ ಈಗಿನವರು ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರ ಕಣ್ಣಿಗೆ ಕಾಣುತ್ತಿದೆ ಎಂದು ಹಿರೇಮಠ ವಿಷಾದಿಸಿದರು.