Tuesday, September 15, 2026
Menu

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದೇ ಒಂದು ಅಂಶವಿಲ್ಲ: ಸಿಎಂ ಕಿಡಿ

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ. ಅವರದ್ದು ಕೇವಲ ರಾಜಕೀಯ ಮನಸ್ಥಿತಿ. ಅವರನ್ನು ಸರಿಪಡಿಸಲು ಆಗುವುದಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್  ಕಿಡಿ ಕಾರಿದರು.

ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಎಂ ಪ್ರತಿಕ್ರಿಯೆ ನೀಡಿದರು. ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವ ಬಗ್ಗೆ ಕೇಳಿದಾಗ, ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ಪ್ರವೃತ್ತಿ ಬಿಜೆಪಿ ನಾಯಕರದ್ದು. ಒಬ್ಬ ಪೊಲೀಸ್ ಅಧಿಕಾರಿ ಏನು ತಪ್ಪು ಮಾತನಾಡಿದ್ದಾರೆ? ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ಬಿಜೆಪಿಯವರು ಮಹಾರಾಜರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಪಂಚಾಯಿತಿ ಮಟ್ಟದ ವಿಚಾರಕ್ಕೆ ವಿರೋಧ ಪಕ್ಷದ ನಾಯಕರು ಹೋಗಿದ್ದು, ಅವರು ಈ ಮಟ್ಟಕ್ಕೆ ಇಳಿದಿದ್ದು ಯಾಕೆ ಎಂದು ನನಗೆ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸಂವಿಧಾನಿಕ ಹುದ್ದೆ. ಅವರಿಂದ ಇನ್ನು ಉನ್ನತ ನಡೆ ನಿರೀಕ್ಷೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು.

“ಅವರು ಹೇಳಿದರು ಎಂದು ಪ್ರಹ್ಲಾದ್ ಜೋಶಿಯಿಂದ ಎಲ್ಲರೂ ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಕಾನೂನು ಪಾಲನೆ ಮಾಡಬೇಕಾಗಿರುವುದು ಯಾರು? ಬಿಜೆಪಿಯವರು ಜನರನ್ನು ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನಾದರೂ ಇದನ್ನು ಬಿಡಲಿ. ಭಾರತಕ್ವಕೆ ಕರ್ನಾಟಕದ ಮೂಲಕ ಗೌರವ ಸಿಗುತ್ತಿದ್ದು, ಇಲ್ಲಿ ಅಹಿತಕರ ಘಟನೆ ನಡೆದರೆ ತೊಂದರೆ ಆಗುವುದು ಭಾರತಕ್ಕೆ. ಪ್ರಧಾನಿ ದೇಶದ ಬಗ್ಗೆ ಕಾಣುತ್ತಿರುವ ಕನಸಿಗೆ ಇಲ್ಲಿನ ಬಿಜೆಪಿ ನಾಯಕರು ಧಕ್ಕೆ ತರುವಂತೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಮಾಡುವುದನ್ನು ಮಾಡಿ, ಹೋರಾಟ ಮಾಡಿ. ಆದರೆ ಅಶಾಂತಿ ಮೂಡಿಸಿ, ರಾಜ್ಯಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ ಎಂದು ಮನವಿ ಮಾಡುವೆ” ಎಂದು ತಿಳಿಸಿದರು.

ದಿನೇ ದಿನೆ ಮಳೆ ಕಡಿಮೆಯಾಗುತ್ತಿರುವ ಬಗ್ಗೆ ಕೇಳಿದಾಗ, ಮಳೆ ಕ್ಷೀಣಿಸುತ್ತಿದೆ. ಶಾಸಕರು ಆತಂಕಪಡುವ ಅಗತ್ಯವಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಕೆಲವರು ರಾಜಕೀಯಕ್ಕೆ ಈ ಪರಿಸ್ಥಿತಿ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಶೀಲನೆಗೆ ಬಂದಾಗ ವರದಿ ತಪ್ಪಾಗಿರಬಾರದು. ಕೆಲವು ಭಾಗದಲ್ಲಿ ಅಧ್ಯಯನ ಆಗಿದ್ದು, ಉಳಿದ ಕಡೆ ವರದಿ ಸಿದ್ಧವಾಗುತ್ತಿದೆ. ಒಂದು ವಾರ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು, ಆದರೆ ಕೆಲ ಭಾಗದಲ್ಲಿ ಸ್ವಲ್ಪ ಮಳೆ ಆಗಿದ್ದು, ಹೇಳಿಕೊಳುವಂತೆ ಆಗಿಲ್ಲ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಜನರನ್ನು ಮಾನಸಿಕವಾಗಿ ಸಿದ್ಧಪಡಿಸಿ, ಕುಡಿಯುವ ನೀರು ಪೂರೈಕೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರ ಜೊತೆ ಚರ್ಚೆ ಮಾಡಿ ಇನ್ನಷ್ಟು ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಇಂಜಿನಿಯರ್ ಗಳ ದಿನ ಆಚರಣೆ ಮಾಡಲಾಗುವುದು  ಸಿಎಂ  ತಿಳಿಸಿದರು. ಸರ್ಕಾರ ವತಿಯಿಂದ ಇಂಜಿನಿಯರ್ ದಿನ ಆಚರಿಸುವ ಪ್ರಸ್ತಾವನೆ ನೀಡಿದ್ದು,  ಅದಕ್ಕೆ ಸಮ್ಮತಿ ಸೂಚಿಸಿದ್ದೇನೆ ಎಂದರು.

ಇಂದು ಇಂಜಿನಿಯರ್ ಗಳ ದಿನವಾಗಿದ್ದು, ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸರ್ಕಾರದ ಪರವಾಗಿ ಮಾಲಾರ್ಪಣೆ ಮಾಡಲಾಗಿದೆ. ಇಂಜಿನಿಯರ್ ಗಳು ದೇಶದ ಆಸ್ತಿ. ವಿಜ್ಞಾನಿಗಳ ಸಂಶೋಧನೆಗಳನ್ನು ಕಾರ್ಯಗತ ಗೊಳಿಸುತ್ತಿರುವವರು ಇಂಜಿನಿಯರ್ ಗಳು. ಎಲ್ಲಾ ಅಭಿವೃದ್ಧಿಗೆ ಅಡಿಪಾಯ ಹಾಕುವವರು ಇಂಜಿನಿಯರ್ ಗಳು. ವಾಸ್ತುಶಿಲ್ಪದ ಪರಂಪರೆಯಲ್ಲಿ ನಾವು ಇಂಜಿನಿಯರ್ ಗಳನ್ನು ಗುರುತಿಸುತ್ತಿದ್ದೆವು. ಈಗ ಇಂಧನ, ಕಟ್ಟಡ ನಿರ್ಮಾಣ, ಐಟಿ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ಮಾದರಿ. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *