ನವದೆಹಲಿ: ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ) ಸೇರಿದಂತೆ ವಿಶ್ವ ಸಂಸ್ಥೆಯ ಇತರ ಹಲವಾರು ಘಟಕಗಳಿಂದ ಹಿಂದೆ ಸರಿಯುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಜೊತೆಗಿನ ಸಂಬಂಧದ ಮರುಪರಿಶೀಲನೆ ಜೊತೆಗೆ ಪ್ಯಾಲೆಸ್ಟೀನಿಯರ ಪ್ರಾಥಮಿಕ ಯುಎನ್ ಪರಿಹಾರ ಸಂಸ್ಥೆಯಿಂದ (ಯುಎನ್‌ಆರ್‌ಡಬ್ಲ್ಯೂಎ) ಹಿಂದೆ ಸರಿದಿದೆ.
ಈ ಯುಎನ್ ಏಜೆನ್ಸಿಗಳೊಳಗಿನ “ಅಮೆರಿಕ ವಿರೋಧಿ ಪಕ್ಷಪಾತ”ಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿ ವಿಲ್ ಶಾರ್ಫ್ ವಿವರಿಸಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮೂರು ವರ್ಷಗಳ ಅವಧಿಗೆ ಸಾಮಾನ್ಯ ಸಭೆಯಿಂದ ಆಯ್ಕೆಯಾದ ೪೭ ಸದಸ್ಯರಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಪ್ರಸ್ತುತ ಅವಧಿಯನ್ನು ಡಿಸೆಂಬರ್ 31 ರಂದು ಮುಕ್ತಾಯಗೊಳಿಸಲು ನಿರ್ಧರಿಸಿತ್ತು.
ಈ ನಿರ್ದೇಶನವು ದೇಶ-ನಿರ್ದಿಷ್ಟ ಮಾನವ ಹಕ್ಕುಗಳ ಮೌಲ್ಯಮಾಪನ ಮತ್ತು ನಿರ್ದಿಷ್ಟ ಹಕ್ಕುಗಳ ಉಲ್ಲಂಘನೆಯ ತನಿಖೆಗಳನ್ನು ಒಳಗೊಂಡಿರುವ ಕೌನ್ಸಿಲ್ನ ಚಟುವಟಿಕೆಗಳಿಂದ ಅಮೆರಿಕದ ಸಂಬಂಧ ಕೊನೆಗೊಳಿಸುತ್ತದೆ. “ಹೆಚ್ಚು ಸಾಮಾನ್ಯವಾಗಿ, ಕಾರ್ಯಾಿದೇಶವು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆ ಮತ್ತು ಧನಸಹಾಯವನ್ನು ಪರಿಶೀಲಿಸಲು ಕರೆ ನೀಡುತ್ತದೆ” ಎಂದು ಶಾರ್ಫ್ ಹೇಳಿದರು.
ರಿಪಬ್ಲಿಕನ್ ಪಕ್ಷವು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ವಾಷಿಂಗ್ಟನ್ನಿನ ಗಣನೀಯ ಆರ್ಥಿಕ ಕೊಡುಗೆಗಳನ್ನು ನಿರಂತರವಾಗಿ ಟೀಕಿಸಿದೆ, ವಿಶೇಷವಾಗಿ ನ್ಯಾಟೋದಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಇತರ ರಾಷ್ಟ್ರಗಳನ್ನು ಒತ್ತಾಯಿಸಿದೆ.
ಯುಎನ್‌ಆರ್ಡಬ್ಲ್ಯೂಎ ಪ್ಯಾಲೆಸ್ಟೀನಿಯರ ಪ್ರಾಥಮಿಕ ಮಾನವೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗಾಜಾದಲ್ಲಿ ಸ್ಥಳಾಂತರಗೊಂಡ ಸುಮಾರು ೧.೯ ಮಿಲಿಯನ್ ವ್ಯಕ್ತಿಗಳಿಗೆ ಅಗತ್ಯ ಸಹಾಯವನ್ನು ಒದಗಿಸಿದೆ.
2023 ರ ಅಕ್ಟೋಬರ್ ೭ ರಂದು ಹಮಾಸ್ ನಡೆಸಿದ ದಾಳಿಯಲ್ಲಿ 12 ಸಿಬ್ಬಂದಿ ಸದಸ್ಯರು ಭಾಗವಹಿಸಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡ ನಂತರ ಬೈಡನ್ ಆಡಳಿತವು ಯುಎನ್‌ಆರ್‌ಡಬ್ಲ್ಯೂಎಗೆ ಧನಸಹಾಯವನ್ನು ಸ್ಥಗಿತಗೊಳಿಸಿತ್ತು.