Wednesday, August 26, 2026
Menu

ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಅಮಿತ್ ಶಾ ಆಗಲು ಬಯಸುವುದಿಲ್ಲ: ಸಿಎಂ ಡಿಕೆ ಶಿವಕುಮಾರ್

ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ.  2029ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಹೇಳಿದ್ದಾರೆ.

ಇಂಡಿಯಾ ಟುಡೇ ರೌಂಡ್ ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ  ಶಿವಕುಮಾರ್  ಮಾತನಾಡಿದ್ದು, ಮುಖ್ಯಾಂಶಗಳು ಹೀಗಿವೆ,  ನಾನೀಗ ಆತುರದ ವ್ಯಕ್ತಿ. ರಾಜ್ಯದ ಜನರು ಹಾಗೂ ದೇಶದ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ನನ್ನ ಬಳಿ ಇರುವ ಸಮಯದಲ್ಲಿ ಉತ್ತಮ ಕೆಲಸ ಮಾಡಿ, ಪಕ್ಷ ಸಂಘಟಿಸಿ ಸಂದೇಶ ರವಾನಿಸಬೇಕು. ನಾವು ಬೇರೆ ರಾಜ್ಯಗಳಿಗೆ ಮಾದರಿಯಾಗಬೇಕು. ನಮ್ಮ ಪಕ್ಷದಲ್ಲಿ ಅಸಮಾಧಾನ  ಇಲ್ಲ. ನಮ್ಮಲ್ಲಿರುವ ಎಲ್ಲಾ ಶಾಸಕರು, ಎಂಎಲ್ ಸಿ ಸಚಿವರಾಗಲು, ನಿಗಮ ಅಧ್ಯಕ್ಷರಾಗಲು ಅರ್ಹರು. ಪಕ್ಷದ ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ಪಡೆದು ಅಂತಿಮ ತೀರ್ಮಾನ ಮಾಡುತ್ತದೆ.

ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಬಂಗಾರಪ್ಪ ಸಚಿವರಾಗಿರಲಿಲ್ಲ. ಕೃಷ್ಣ  ಅವರ ಕಾಲದಲ್ಲಿ ಹಿರಿಯರು ಸಂಪುಟದಿಂದ ಹೊರಗುಳಿದರು.  ಧರಂ ಸಿಂಗ್ ಕಾಲದಲ್ಲಿ ನಾನು ಹಾಗೂ ಪರಮೇಶ್ವರ್ ಸಚಿವ ಸ್ಥಾನ ವಂಚಿತರಾಗಿದ್ದೆವು. ಸಿದ್ದರಾಮಯ್ಯ ಅವರ ಕಾಲದ ಆರಂಭದಲ್ಲೂ ನಾನು ಅವಕಾಶ ವಂಚಿತನಾಗಿದ್ದೆ. ಈಗ ನಾನು ಸಿಎಂ, ಪರಮೇಶ್ವರ್ ಡಿಸಿಎಂ. ಆಸೆ ಪಡುವುದು ತಪ್ಪಲ್ಲ. ಪಕ್ಷದ ಪರಿಸ್ಥಿತಿ ಅರಿಯಬೇಕು.

ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಕಾಂಗ್ರೆಸ್ ಸರ್ಕಾರದ ಬದ್ಧತೆ, ಸಿದ್ಧಾಂತ. ಮುಂದಿನ ಎರಡು ಮೂರು ದಿನಗಳಲ್ಲಿ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನ. ಕಾಂಗ್ರೆಸ್ ಪಕ್ಷವೇ ಒಂದು ಬಣ. ನನಗೆ, ಸಿದ್ದರಾಮಯ್ಯ ಅವರಿಗೆ ಯಾವುದೇ ಬಣ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ. ನಾವು ಪಕ್ಷದ ಸೇನಾನಿಯಾಗಿ ಕೆಲಸ ಮಾಡುತ್ತೇವೆ.

ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೂ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ.  ಈ ಸ್ಥಾನದಲ್ಲಿ ಕೂತಾಗ ಸಮಾಜದ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು.  ಅಸ್ಸಾಂ ನಲ್ಲಿ ಸರ್ಕಾರದ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಾರೆ. ಆದರೆ ನಾವು ಎಲ್ಲಾ ವರ್ಗದ ಜನರಿಗೂ ನೀಡುತ್ತೇವೆ. ಆಡಳಿತ ವಿಚಾರದಲ್ಲಿ ಎಲ್ಲರನ್ನೂ ಸಮಾನರಾನ್ನಾಗಿ ನೋಡಬೇಕು.

ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ.  ಮೈಸೂರು ಕಾರ್ಯಕ್ರಮದಲ್ಲಿ  ಕರ್ನಾಟಕಕ್ಕೆ ಹೃದಯ ಶ್ರೀಮಂತಿಕೆಯಿಂದ ನೆರವು ನೀಡಿ ಎಂದು ಪ್ರಧಾನಿಗಳನ್ನು ಕೇಳಿದೆ. ಕರ್ನಾಟಕವು ದೇಶದ ಜಿಡಿಪಿ, ತೆರಿಗೆ ವಿಚಾರದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ. ಮಹಾರಾಷ್ಟ್ರ, ಗುಜರಾತಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ತಾರತಮ್ಯ ಮಾಡಲಾಗುತ್ತಿದೆ.  ಕ್ಷೇತ್ರ ಮರುವಿಂಗಡಣೆ, ಅನುದಾನ ಹಂಚಿಕೆಯನ್ನು ಜನಸಂಖ್ಯೆ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯ ಆಗುತ್ತಿದೆ. ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ನಾವು ಒಪ್ಪುವುದಿಲ್ಲ.

ಹಾಲಿ ಇರುವ ಸಂಖ್ಯೆ ಉಳಿಸಿಕೊಂಡು ಮಹಿಳಾ ಮೀಸಲಾತಿ ನೀಡಲಿ. ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಿದರೆ ದಕ್ಷಿಣ ಭಾರತದ ಧ್ವನಿ ಹತ್ತಿಕ್ಕುವಂತಾಗುತ್ತದೆ. ಈ ವಿಚಾರವಾಗಿ ತಮಿಳುನಾಡು, ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು  ಧ್ವನಿಗೂಡಿಸಿದ್ದಾರೆ. ದಕ್ಷಿಣ ಭಾರತದ ಧ್ವನಿಯನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು.

ಬೆಂಗಳೂರಿನಲ್ಲಿ  ಇರುವಂತೆ ದೇಶದ ಬೇರೆ ನಗರಗಳಲ್ಲೂ ರಸ್ತೆಗುಂಡಿಗಳಿವೆ.  ಪರಿಹಾರ ನೀಡಲು ವೈಟ್ ಟಾಪಿಂಗ್ ರಸ್ತೆ ಮಾಡುತ್ತಿದ್ದೇವೆ. ನಗರದಲ್ಲಿ 1.35 ಕೋಟಿ ವಾಹನಗಳಿವೆ.  ಸಂಚಾರ ದಟ್ಟಣೆ  ಸಮಸ್ಯೆ ನಿವಾರಣೆಗೆ 47 ಕಿ.ಮೀ ಟನಲ್ ರಸ್ತೆ, 115 ಕಿ. ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲು ಮುಂದಾಗಿದ್ದೇವೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ದೇಶದ ಬಿಜೆಪಿ ರಾಜ್ಯಗಳಲ್ಲೂ ಈ ಯೋಜನೆ ಮಾಡಲಾಗುತ್ತಿದೆ. ಆದರೆ ಬಿಜೆಪಿ ಸಂಸದ ಈ ವಿಚಾರದಲ್ಲಿ ವಿರೋಧ ಮಾಡುತ್ತಿದ್ದಾರೆ.

ಮೇಕೆದಾಟು ಯೋಜನೆಯಲ್ಲಿ ಶೇಖರಣೆಯಾಗುವ 95% ನೀರು ತಮಿಳುನಾಡಿಗೆ ಹರಿಯುತ್ತದೆ. ಬೆಂಗಳೂರಿಗೆ ಮಾತ್ರ ಕುಡಿಯುವ ನೀರು ಪೂರೈಸಲಾಗುವುದು. ನೀರಾವರಿಗೆ ಒಂದು ಹನಿ ನೀರು ಬಳಸುವುದಿಲ್ಲ.   ನಮ್ಮ ನೆಲದಲ್ಲಿ ನಮ್ಮ ಯೋಜನೆಗೆ ಯಾರ ಅಪ್ಪಣೆ ಬೇಕಿಲ್ಲ ಎಂದು ಕೋರ್ಟ್ ಹೇಳಿದೆ.  ನಾವು ತಮಿಳುನಾಡಿನ ಪಾಲಿನ 177 ಟಿಎಂಸಿ ಹರಿಸಲು  ಬದ್ಧ.  ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಸಚಿವ ಸಿ ಆರ್ ಪಾಟೀಲ್  ನೇತೃತ್ವದಲ್ಲಿ ಮೂರು ರಾಜ್ಯಗಳ ಸಿಎಂ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ಹಾಗೂ ಹಣಕಾಸು ಸಚಿವರು ನಾಲ್ಕು ವರ್ಷಗಳ ಹಿಂದೆ  5,400 ಕೋಟಿ ಘೋಷಿಸಿದರು. ಇವರೆಗೂ ನಯಾಪೈಸೆ ನೀಡಿಲ್ಲ.

ಕೇಂದ್ರದ ಸಚಿವ ಸಂಪುಟ, ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಸಚಿವರ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣ ಇಲ್ಲವೇ? ನಮ್ಮ ರಾಜ್ಯದಲ್ಲಿ ಕಳೆದ ಸರ್ಕಾರಗಳಲ್ಲಿ ಕಳಂಕಿತ ಸಚಿವರು ಇರಲಿಲ್ಲವೇ? ನಾಗೇಂದ್ರ  2 ವರ್ಷಗಳಿಂದ ಸಂಪುಟದಿಂದ ಹೊರಗಿದ್ದರು. ಇಲಾಖೆ ಆಂತರಿಕ ತನಿಖೆಯಲ್ಲಿ ಪ್ರಕರಣದಲ್ಲಿ ನಾಗೇಂದ್ರ ಅವರ ಕೈವಾಡ ಇಲ್ಲ ಎಂದು ಬಂದಿದೆ. ಹೀಗಾಗಿ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿದ್ದೇವೆ. ಹಗರಣದಲ್ಲಿ ಲೂಟಿ ಮಾಡಿದ್ದ 95% ಹಣವನ್ನು ವಾಪಸ್ ಪಡೆಯಲಾಗಿದೆ. ನಾಗೇಂದ್ರ ಶಿಸ್ತಿನ ಸಿಪಾಯಿಯಾಗಿ ಪಕ್ಷ ಹೇಳಿದಂತೆ ಕೇಳುತ್ತಾರೆ.

ಯುವ ಪೀಳಿಗೆ ದೇಶದ ಧ್ವನಿ. ಅವರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರೇ ಉದ್ಯೋಗ ಸೃಷ್ಟಿಸುವಂತೆ ಪ್ರೋತ್ಸಾಹಿಸಬೇಕು. ಯುವಕರಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಬೇಕು.  ಡ್ರಗ್ಸ್ ಹಾಗೂ ಇತರ ವ್ಯಸನದಿಂದ ದೂರ ಇಡಬೇಕು. ಯುವ ಸಮುದಾಯವನ್ನು ವಿವಿಧ ಚಟುವಟಿಕೆಯಲ್ಲಿ ನಿರತರಾಗುವಂತೆ ನೋಡಿಕೊಳ್ಳಬೇಕು.  ರಾಜ್ಯದೆಲ್ಲೆಡೆ 10 ಸಾವಿರ ಸಂಘ ರಚಿಸಲು ಮುಂದಾಗಿದ್ದೇವೆ.

ನಾನು ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾರ ಇಲಾಖೆ ಮುಚ್ಚಬೇಕೇ?, ಕೇಂದ್ರ ಸರ್ಕಾರ ಆ ಇಲಾಖೆ ಮುಚ್ಚುವುದೇ?  ದೇಶದಲ್ಲಿರುವ 18-20% ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅವರೂ ಭಾರತೀಯರು. ಪಕ್ಷದ ಸಿದ್ಧಾಂತ ಹಾಗೂ ತೀರ್ಮಾನಕ್ಕೆ ನಾವು ಬದ್ಧ. ಮುಂದಿನ ದಿನಗಳಲ್ಲಿ ಅದನ್ನೇ ಪಾಲಿಸುತ್ತೇವೆ.

ಪ್ರತಿಯೊಬ್ಬ ಅರ್ಹ ಮತದಾರರ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ. ಹೀಗಾಗಿ ಮತದಾನದ ಹಕ್ಕು ರಕ್ಷಣೆಗೆ ನಾವು ನಿವಾಸ ದೃಢಿಕರಣ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದೇವೆ. 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆಗಳಲ್ಲಿ ಈಗ ಇರುವುದಕ್ಕಿಂತ  ಹೆಚ್ಚಿನ ಸೀಟು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2029ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ.

ನಾನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಒಡೆದಿಲ್ಲ. ಬಿಜೆಪಿ ಶಾಸಕರೂ ಕಾಂಗ್ರೆಸ್ ಸರ್ಕಾರವೇ ಈ ರಾಜ್ಯದ ಭವಿಷ್ಯ ಎಂದು ಭಾವಿಸಿದ್ದಾರೆ.  12 ವಿರೋಧ ಪಕ್ಷಗಳ ಶಾಸಕರು  ಆತ್ಮಸಾಕ್ಷಿ ಮತಗಳನ್ನು ನಮಗೆ ಹಾಕಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ತನಿಖೆ ಮಾಡಿದವು. ಅದರ ವರದಿ ಏನಾಯ್ತು? ಕುಮಾರಸ್ವಾಮಿ ಕೊನೆಗೆ ನನಗೆ ಮೊದಲೇ ಸೋಲು ಗೊತ್ತಿತ್ತು, ಶಾಸಕರ ಮನದಲ್ಲಿ ಏನಿದೆ ತಿಳಿಯಲು ಅಭ್ಯರ್ಥಿ ಕಣಕ್ಕೆ ಇಳಿಸಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *