ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಎಂಬ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮದುವೆಯನ್ನೇ ಅಂತ್ಯಗೊಳಿಸಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಮನೆಯ ಈ ನಿಯಮಗಳಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪತಿ ಕೂಡ ತಾಯಿ ಹೇಳಿರುವ ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಆಕೆ ಬೇಸರಗೊಂಡಿದ್ದಳು, ಪತಿ ಬಳಿ ಹಲವು ಬಾರಿ ತಾಯಿಗೆ ಬುದ್ಧಿವಾದ ಹೇಳುವಂತೆ ಕೇಳಿಕೊಂಡರೂ ಏನು ಪ್ರಯೋಜನವಾಗಿರಲಿಲ್ಲ ಹಾಗಾಗಿ ಆಕೆ ಗಂಡನಿಂದ ಬೇರ್ಪಡುವುದೇ ಒಳ್ಳೆಯದು ಎಂದು ನಿರ್ಧರಿಸಿದ್ದಾಳೆ.
ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ 30 ವರ್ಷ ಆಸುಪಾಸಿನವರಾಗಿದ್ದು, 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಆತ ಒಬ್ಬ ಸಂಪ್ರದಾಯಸ್ಥ ಕುಟುಂಬದಿಂದ ಬಂದವನಾಗಿದ್ದ, ಮದುವೆಯಾಗಿ ಆ ಮನೆಗೆ ಹೋದ ಕೆಲವೇ ದಿನಗಳಲ್ಲಿ ಎಲ್ಲವೂ ಆಕೆಗೆ ಅರಿವಾಗಿತ್ತು. ಆಕೆಯ ಅತ್ತೆ-ಮಾವಂದಿರುವ ಹಳೆಯ ಪದ್ಧತಿ, ಸಂಪ್ರದಾಯಗಳನ್ನೇ ನಂಬಿದ್ದರು.
ಮದುವೆಯಾಗಿ ಹೊಸತರಲ್ಲಿ ಏಳು ದಿನಗಳವರೆಗೆ ಅಡುಗೆ ಮನೆ ಅಥವಾ ಪೂಜಾ ಸ್ಥಳಕ್ಕೆ ಬಾರದಂತೆ ನಿಷೇಧಿಸಲಾಗಿತ್ತು. ಮನೆಯಿಂದ ಹೊರಹೋಗಬಾರದು, ಒಂದು ಕೋಣೆಯಲ್ಲಿಯೇ ಇರಬೇಕು, ಸ್ನಾನವನ್ನು ಕೂಡ ಮಾಡಬಾರದು ಎಂದು ಹೇಳಿದಾಗ ಆಕೆಗೆ ಆಘಾತವಾಗಿತ್ತು. ಆಕೆಯ ದೇಹದೊಳಗೆ ದುಷ್ಟಶಕ್ತಿಗಳಿವೆ ಹೀಗಾಗಿ ರಸ್ತೆಯಲ್ಲಿ ಹೋಗುವಾಗ ಬೀದಿನಾಯಿಗಳು ಆಕೆಯನ್ನು ನೋಡಿ ಬೊಗಳುತ್ತವೆ. ಬಳಿಕ ಆಕೆ ತನ್ನ ಗಂಡನ ಮನೆ ತೊರೆದು ಹೆತ್ತವರ ಮನೆಗೆ ಬಂದಿದ್ದಳು.