Tuesday, February 04, 2025
Menu

ನಾಳೆ ದೆಹಲಿ ವಿಧಾನಸಭಾ ಚುನಾವಣೆ: ಬಿಜೆಪಿ- ಆಪ್ ನೇರ ಹಣಾಹಣಿ

ತೀವ್ರ ಕುತೂಹಲ ಕೆರಳಿಸಿರುವ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದ್ದು, ಆಡಳಿತಾರೂಢ ಆಮ್ ಆದ್ಮಿ ಹಾಗೂ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸತತ ಮೂರನೇ ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಕೇಂದ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ದೆಹಲಿಯಲ್ಲಿ ಖಾತೆ ತೆರೆಯಲು ವಿಫಲವಾಗಿರುವ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿದೆ.

ಪ್ರತಿಷ್ಠೆಯ ಕಣವಾಗಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಇತರೆ ಪಕ್ಷಗಳು ಆಪ್ ಗೆ ಬೆಂಬಲ ಘೋಷಿಸಿದೆ. ಇದರಿಂದ ಮತದಾರರ ಒಲವು ಯಾರ ಕಡೆಗಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಫೆಬ್ರವರಿ 5, ಬುಧವಾರದಂದು ೭೦ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ೬೯೯ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಹುಮತ ಪಡೆಯಲಿ 36 ಸ್ಥಾನಗಳಲ್ಲಿ ಗೆಲುವು ಅಗತ್ಯವಿದ್ದು, 1.56 ಕೋಟಿ ಜನರು ಮತ ಚಲಾಯಿಸಲಿದ್ದಾರೆ. ಒಂದೇ ಹಂತದಲ್ಲಿ ನಡೆಯಲಿರುವ ಮತದಾನದ ಫಲಿತಾಂಶ ಫೆಬ್ರವರಿ 8ರಂದು ಹೊರಬೀಳಲಿದೆ.

ಮತದಾನದ ದಿನವಾದ ಬುಧವಾರ ದೆಹಲಿ ಸರ್ಕಾರ ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ನಗರದಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಕಚೇರಿಗಳಿಗೆ ರಜೆ ಅನ್ವಯಿಸಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ತಿಳಿಸಿದ್ದಾರೆ.

ಯಮುನಾ ವಿವಾದದ ಕೇಂದ್ರಬಿಂದು

ದೆಹಲಿ ಅಭಿವೃದ್ಧಿ ಕುರಿತು ಚರ್ಚೆಗಳು ನಡೆದರೂ ಯಮುನಾ ನದಿ ಮಲೀನವಾಗಿರುವುದು ಪ್ರಮುಖ ವಿವಾದದ ಕೇಂದ್ರ ಬಿಂದುವಾಗಿತ್ತು. ಬಿಜೆಪಿ ಸರ್ಕಾರಗಳು ಯಮುನಾ ನದಿಗೆ ವಿಷ ಬೆರೆಸುತ್ತಿದ್ದಾರೆ ಎಂಬ ಕೇಜ್ರಿವಾಲ್ ಆರೋಪ ಕೇಂದ್ರ ಚುನಾವಣಾ ಆಯೋಗದ ಕೆಂಗೆಣ್ಣಿಗೆ ಗುರಿಯಾಗಿತ್ತು. ಆದರೆ ಯಮುನಾ ನದಿ ನೀರು ಕುಡಿದರೆ ನಾವು ವಿಷ ಇಲ್ಲ ಎಂದು ಒಪ್ಪುತ್ತೇವೆ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.

30 ಸಾವಿರ ಪೊಲೀಸ್ ಸಿಬ್ಬಂದಿ ಭದ್ರತೆ

3 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಎಲ್ಲವೂ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಆದ್ದರಿಂದ ಚುನಾವಣಾ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. 150 ಪ್ಯಾರಾ ಮಿಲಿಟರಿ ಪಡೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ದೆಹಲಿಯ ತುಂಬಾ 30,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅರವಿಂದ ಕೇಜ್ರಿವಾಲ್ ಆಕ್ಷೇಪ: ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ,ಚುನಾವಣಾ ಭದ್ರತೆಗೆ ಗುಜರಾತ್ ಪೊಲೀಸ್ ತುಕಡಿ ನಿಯೋಜನೆ ಮಾಡಿರುವುದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಆದರೆ ಚುನಾವಣಾ ಆಯೋಗ ಈ ಕುರಿತು ಸ್ಪಷ್ಟನೆ ನೀಡಿತ್ತು. ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಕಾರಣ ಅಕ್ಕಪಕ್ಕದ ರಾಜ್ಯಗಳ ಪೊಲೀಸರು ಅಲ್ಲಿಗೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಆದ್ದರಿಂದ ಗುಜರಾತ್, ಕರ್ನಾಟಕದ ಪೊಲೀಸ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿತ್ತು.

Related Posts

Leave a Reply

Your email address will not be published. Required fields are marked *