ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿಯುವರೇ ಎಂಬುದು ಕಾದು ನೋಡಬೇಕಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು, ಭಾರತ ತಂಡ ಟಿ-20 ಸರಣಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಭಾರತ ತಂಡ ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಗುರಿ ಹೊಂದಿದೆ.
ಬಿಳಿ ಚೆಂಡಿನ ಪಂದ್ಯಗಳಲ್ಲಿ ಪ್ರಾಬಲ್ಯ ವಿರಾಟ್ ಕೊಹ್ಲಿ ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ 13,906 ರನ್ ಗಳಿಸಿದ್ದು, 14 ಸಾವಿರ ರನ್ ಗಡಿ ದಾಟಲು 94 ರನ್ ಬೇಕಾಗಿದೆ.
ಸಚಿನ್ ತೆಂಡೂಲ್ಕರ್ 2006ರಲ್ಲಿ ಪೇಶಾವರದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ 14,000 ರನ್ ಪೂರೈಸಿದ್ದರು. ಈ ಸಾಧನೆಗಾಗಿ ಅವರು 350 ಇನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಈ ಪಂದ್ಯವನ್ನು ಭಾರತ ಡಕ್ ವರ್ತ್ ಲೂಯಿಸ್ ನಿಯಮದಿಂದ 7 ರನ್ ಗಳಿಂದ ಸೋಲುಂಡಿತ್ತು.
ವಿರಾಟ್ ಕೊಹ್ಲಿ 283 ಪಂದ್ಯಗಳಿಂದ 58.18 ಸರಾಸರಿಯಲ್ಲಿ 13,906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಹಾಗೂ 72 ಅರ್ಧಶತಕ ಸೇರಿವೆ. ಕೊಹ್ಲಿ ಮೊದಲ ಪಂದ್ಯದಲ್ಲಿ ಶತಕ ಗಳಿಸಿದರೆ ಅತ್ಯಂತ ವೇಗವಾಗಿ 14,000 ರನ್ ಪೂರೈಸಿದ ದಾಖಲೆ ಬರೆಯುವ ಮೂಲಕ ಸಚಿನ್ ದಾಖಲೆ ಮುರಿಯಲಿದ್ದಾರೆ.
ಕೊಹ್ಲಿ ಈಗಾಗಲೇ ಸಚಿನ್ ಹೆಸರಿನಲ್ಲಿದ್ದ 49 ಶತಕಗಳ ಸಾರ್ವಕಾಲಿಕ ದಾಖಲೆಯನ್ನು ಕೊಹ್ಲಿ ಮುರಿದಿದ್ದು, ಇದೀಗ 14 ಸಾವಿರ ರನ್ ಗಳ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.