ನಮ್ಮ ಕ್ಲಿನಿಕ್ ಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದ್ದು, ಬೆಂಗಳೂರಿನ ಎಂಟು ವಲಯಗಳಲ್ಲಿ ನಮ್ಮ ಕ್ಲಿನಿಕ್ಗಳ ಸಂಪೂರ್ಣ ಮಾಹಿತಿಗಾಗಿ ಬಿಬಿಎಂಪಿಯ ಆರೋಗ್ಯ ವಿಭಾಗವು ಪ್ರತಿ ವಾರ್ಡ್ನಲ್ಲೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ಧತೆ ನಡೆಸಿದೆ.
ಕ್ಯೂಆರ್ ಕೋಡ್ ಮೂಲಕ ಆಯಾ ವಾರ್ಡ್ಗಳಲ್ಲಿ ನಮ್ಮ ಕ್ಲಿನಿಕ್ ಎಲ್ಲಿದೆ, ಅಲ್ಲಿ ಸಿಗೋ ಸೌಲಭ್ಯಗಳೇನು ಎಂಬ ಬಗ್ಗೆ ಜನರಿಗೆ ಮಾಹಿತಿ ದೊರೆಯಲಿದೆ. ಕ್ಯೂಆರ್ ಕೋಡ್ ಜೊತೆಗೆ ಆಯಾ ವಲಯದಲ್ಲಿರುವ ನಮ್ಮ ಕ್ಲಿನಿಕ್ಗಳಲ್ಲಿ ಇರುವ ವೈದ್ಯರ ಮಾಹಿತಿ, ವೈದ್ಯರ ಪೋಟೋವನ್ನು ಪ್ರಕಟಿಸುವ ಮೂಲಕ ಜನರಿಗೆ ನಮ್ಮ ಕ್ಲಿನಿಕ್ ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ನೀಡಲು ಮುಂದಾಗಿದೆ.
ಜನರಲ್ಲಿ ನಮ್ಮ ಕ್ಲಿನಿಕ್ಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಬಿಬಿಎಂಪಿ ಆರೋಗ್ಯ ವಿಭಾಗದ ಉದ್ದೇಶವಾಗಿದೆ ಎಂದು ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಬಡವರು, ದಿನಗೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಬೇಕು ಎನ್ನುವ ಉದ್ದೇಶದೊಂದಿಗೆ 2022ರ ಡಿಸೆಂಬರ್ 14 ರಂದು ಕರ್ನಾಟಕದಾದ್ಯಂತ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲಾಗಿತ್ತು.