ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಖಾಂಡ್ಯ ಹೋಬಳಿಯ ಮತ್ತಿಖಂಡ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿತ್ತು.
ಈಗ ಎನ್ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲಿ ಮೂರು ಜನರಲ್ಲಿ ಕೆಎಫ್ಡಿ ಕಾಣಿಸಿಕೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್ಡಿ ವಾರ್ಡ್ ತೆರೆಯಲಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 132 ಜನರಲ್ಲಿ ಕೆಎಫ್ಡಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು. ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಅರೋಗ್ಯ ಇಲಾಖೆ ಕೆಎಫ್ಡಿ ಅಲರ್ಟ್ ಘೋಷಣೆ ಮಾಡಿದೆ. ಖಾಂಡ್ಯ ಹೋಬಳಿ ಮತ್ತಿಖಂಡ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದ್ದು, ಅರಣ್ಯದಲ್ಲಿ ಮಂಗಗಳು ಸಾವಿನ ಮಾಹಿತಿ ಸಂಗ್ರಹ ಮಾಡಲಾಗಿದೆ.
ಖಾಂಡ್ಯ ಹೋಬಳಿ, ಎನ್ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಅರಣ್ಯಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.