ಬೆಂಗಳೂರು: ಸ್ನಾತಕೋತ್ತರ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ವಸತಿ ನಿಲಯದಲ್ಲಿ ನಡೆದಿದೆ.
ಹೆಚ್. ಎನ್ ಪಾವನ (23) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.ಕನ್ನಡ ವಿಭಾಗದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಪಾವನ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಮಾಬಾಯಿ ಅಂಬೇಡ್ಕರ್ ಮಹಿಳಾ ವಸತಿ ನಿಲಯದಲ್ಲಿರುವ ತನ್ನ ಕೊಠಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿನಿ ಹೆಚ್ ಡಿ ಕೋಟೆ ತಾಲೂಕಿನ ನಿವಾಸಿ. ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ನೀಡುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಪಾವನ ಕಾರ್ಯಕ್ರಮ ನಡೆಯುವಾಗಲೇ ಅರ್ಧಕ್ಕೆ ಎದ್ದು ತನ್ನ ರೂಮ್ಗೆ ಬಂದಿದ್ದರು. ಹೀಗೆ ಬಂದವರು 11 ಗಂಟೆಗೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಇತರ ವಿದ್ಯಾರ್ಥಿನಿಯರು ರೂಮಿಗೆ ಬಂದಾಗ ವಿಚಾರ ಗೊತ್ತಾಗಿದೆ. ಸ್ಥಳಕ್ಕೆ ಆಗಮಿಸಿದ ಜ್ಞಾನಭಾರತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಬಳಿ ಡೆತ್ ನೋಟ್ ಪತ್ತೆಯಾಗಿದೆ ಎಂದಿದ್ದಾರೆ.
‘ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಸದ್ಯ ಪಾವನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರವಾಗಲಿದೆ’ ಎಂದು ಜ್ಞಾನಭಾರತಿ ಪೊಲೀಸರು ಮಾಹಿತಿ ನೀಡಿದ್ದಾರೆ