ಋಷಿಕೇಶ: ಹಿಂದೂಗಳೀಗೆ ಅತಿ ಪವಿತ್ರ ಯಾತ್ರಾಸ್ಥಳವಾಗಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮದ ಬಾಗಿಲು ಮೇ 4 ರಂದು ಬೆಳಗ್ಗೆ 6 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆಯಲಿದೆ.
ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ತೆಹ್ರಿ ಜಿಲ್ಲೆಯ ನರೇಂದ್ರ ನಗರದ ಅರಮನೆಯಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ ಹಾಗೂ ಪ್ರಾರ್ಥನೆ ನಂತರ ಪಂಚಾಂಗ ಲೆಕ್ಕಾಚಾರದ ಮೂಲಕ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಲಾಯಿತು.
ಇದೇ ಸಮಯದಲ್ಲಿ ಗಡು ಘಡ(ಪವಿತ್ರ ಎಣ್ಣೆಯ ಪಾತ್ರೆ)ಕ್ಕೆ ಎಳ್ಳೆಣ್ಣೆ ಸುರಿಯುವ ದಿನಾಂಕವನ್ನು ಏಪ್ರಿಲ್ 22ಕ್ಕೆ ನಿಗದಿಪಡಿಸಲಾಯಿತು.
ತೆಹ್ರಿ ರಾಜಮನೆತನದವರು, ಬದರಿನಾಥ- ಕೇದಾರನಾಥ ದೇವಾಲಯ ಸಮಿತಿ, ದಿಮ್ರಿ ಧಾರ್ಮಿಕ ಕೇಂದ್ರ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ಮುಖಂಡರು ಬದರಿನಾಥ ದ್ವಾರಗಳನ್ನು ತೆರೆಯುವ ದಿನಾಂಕವನ್ನು ನಿರ್ಧರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ನರೇಂದ್ರ ನಗರದ ರಾಜ್ ಮಹಲ್ನಲ್ಲಿ, ಮಹಾರಾಜ ಮನುಜ್ಯೇಂದ್ರ ಶಾ, ರಾಜಕುಮಾರಿ ಶಿರ್ಜಾ ಶಾ, ಪಂಡಿತ್ ಕೃಷ್ಣ ಪ್ರಸಾದ್ ಉನಿಯಾಲ್ ಉಪಸ್ಥಿತರಿದ್ದರು.
ಬದರಿನಾಥ ಧಾಮದ ಬಾಗಿಲು ತೆರೆಯಲು ಹಾಗೂ ಮುಚ್ಚಲು ವಿಶೇಷ ಪ್ರಕ್ರಿಯೆ ಇದೆ. ತೆಹ್ರಿ ಜಿಲ್ಲೆಯ ನರಂದ್ರನಗರದಲ್ಲಿರುವ ರಾಜಮನೆತನದ ಆಸ್ಥಾನದಲ್ಲಿ ಬಸಂತ್ ಪಂಚಮಿಯಂದು ಹಾಗೂ ವಿಯಜದಶಮಿ ಹಬ್ಬದಂದು ಪೂಜೆ ಹಾಗೂ ಪಂಚಾಂಗ ಲೆಕ್ಕಾಚಾರದ ನಂತರ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಲಾಗುತ್ತದೆ.
ಚಳಿಗಾಲದಲ್ಲಿ ಹಿಮಾವೃತವಾಗುವ ಹಿನ್ನೆಲೆ ಬದರಿನಾಥ ಧಾಮದ ಬಾಗಿಲುಗಳನ್ನು ಕಳೆದ ನವೆಂಬರ್‌ನಲ್ಲಿ ಮುಚ್ಚಲಾಗಿತ್ತು. ಇದಕ್ಕೆ ಅನೇಕ ಭಕ್ತರು ಸಾಕ್ಷಿಯಾಗಿದ್ದರು.
ಪ್ರತಿ ವರ್ಷ ದೀಪಾವಳಿಯ ನಂತರ, ಚಾರ್ ಧಾಮ್ ಗಳಾದ ಬದರೀನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳನ್ನು ಭಕ್ತರಿಗೆ ಮುಚ್ಚಲಾಗುತ್ತದೆ. ಮತ್ತೆ ಏಪ್ರಿಲ್-ಮೇ ತಿಂಗಳಲ್ಲಿ ಬಾಗಿಲನ್ನು ತೆರೆಯಲಾಗುತ್ತದೆ.
ಆರು ತಿಂಗಳ ಕಾಲ ನಡೆಯುವ ತೀರ್ಥಯಾತ್ರೆಯ ಸಮಯದಲ್ಲಿ, ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಚಾರ್ ಧಾಮ್ ಗಳಿಗೆ ಭೇಟಿ ನೀಡುತ್ತಾರೆ.