ಹೊಸ ತೆರಿಗೆ ಪದ್ಧತಿ ಜಾರಿ ಘೋಷಿಸುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಮರ ಸಾರಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ.
ಸೋಮವಾರ ಷೇರು ಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ರೂಪಾಯಿ ಮೌಲ್ಯ ಕುಸಿತ ಆರಂಭಿಸಿದ್ದು, ಡಾಲರ್ ಎದುರು ದಾಖಲೆಯ 87.29 ಮೊತ್ತಕ್ಕೆ ರೂಪಾಯಿ ಕುಸಿತ ಕಂಡಿದೆ.
ಟ್ರಂಪ್ ಈಗಾಗಲೇ ಚೀನಾ, ಕೆನಡಾ ಹಾಗೂ ಮೆಕ್ಸಿಕೊ ಸೇರಿದಂತೆ ವಿವಿಧ ದೇಶಗಳ ಮೇಲೆ ತೆರಿಗೆ ವಿಧಿಸಿದ್ದಾರೆ. ಇದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದು, ಭಾರತದ ಮೇಲೂ ದುಷ್ಪರಿಣಾಮ ಉಂಟಾಗಿದೆ.
ಅಮೆರಿಕ ಜಗತ್ತಿನ ಇತರೆ ರಾಷ್ಟ್ರಗಳ ಮೇಲೆ ವ್ಯಾಪಾರ ಸಮರ ಹೂಡಿದ್ದರಿಂದ ಸೋಮವಾರ ಭಾರತದ ಷೇರು ಮಾರುಕಟ್ಟೆ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು, ಬಿಎಸ್ ಇ ಸೂಚ್ಯಂತ 400 ಅಂಕಗಳಷ್ಟು ಕುಸಿತ ಕಂಡು 77,084ಕ್ಕೆ ಇಳಿದಿದೆ.
ನಿಫ್ಟಿ 160 ಅಂಕಗಳಷ್ಟು ಕುಸಿತ ಕಂಡಿದ್ದು, 23,320 ಕ್ಕೆ ಇಳಿಕೆಯಾಗಿದೆ. ಇದರಿಂದ ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ರಿಯಲನ್ಸ್, ಪವರ್ ಗ್ರೀಡ್, ಟರ್ಬೊ ಮುಂತಾದ ಕಂಪನಿಗಳು ದೊಡ್ಡ ಹೊಡೆತ ತಿಂದಿವೆ.