ಪ್ರತಿಯೊಬ್ರು ಎಷ್ಟೆಷ್ಟೋ ಕಷ್ಟ ಬಿದ್ದು ಏನಾರ ಬರುದ್ರ ಮತ್ತ ಬುಕ್ಪ್ರಿಂಟ್ಮಾಡಿದ್ರ… ಅಡುಗೆ ಮನಿ ಸಾಹಿತ್ಯ ಅಂತ ಮೂಗು ಮುರಿತಾರಲ್ರೀ ಈ ಗಂಡಸರು. ಪುಸ್ತಕದ ಅಂಗಡಿಯೊಳಗ ಹೆಣ್ಮಕ್ಕಳು ಬರೆದ ಪುಸ್ತಕಕ್ಕ ಒಂದಿಷ್ಟರ ಗಂಟು ಬೀಳ್ತಾರೇನ್ರೀ ಓದವ್ರು… ಯಾಕಾರ ಬರೀಬೇಕು ಅನ್ಸುವಂಗ ವರ್ತಸ್ತಾರ. ಇಲ್ಲೀನೂ ಸ್ತ್ರೀ ಪುರುಷ ಬೇಧ… ಮಹಿಳಾ ಸಾಹಿತ್ಯವನ್ನ ಓದೋರು, ಪ್ರೋತ್ಸಾಹ ಮಾಡೋರು ಎ ನೂರುಕ್ಕ ಒಬ್ರ ನೋಡ್ರೀ , ಮತ್ತ ಮೂರೊತ್ತು ಅಡಗಿಮನಿಯೊಳಗ ಇದ್ದು ಬರದ್ರ ಅಡುಗಿ ಮನಿ ವಿಷಯಾನ ಬರಿತೀವಿ. ಅದನ್ನ ಬಿಟ್ಟು ಹೊರಗಿನ ಪ್ರಪಂಚದಾಗ ಅಡ್ಡಾಡಬೇಕು. ತಿಳಕೋಬೇಕು. ಆಗ ಬ್ಯಾರೆ ರೀತಿಯೊಳಗ ಬರೀಬಹುದೇನೋ… ನಾವು ಸ್ವಲ್ಪ ಬದಲಾಗ್ಬೇಕ್ರೀ…
ವಿಚಾರಗೋಷ್ಠಿ, ಕವಿಗೋಷ್ಠಿಗಳು ಮುಗಿದ ಮೇಲೆ ಸಮಾನಮನಸ್ಕ ಕವಿಗಳು ಅಲ್ಲ ಕವಯತ್ರಿಯರ ಅನಧಿಕೃತ ಗೋಷ್ಠಿ ಪ್ರಾರಂಭವಾಗಿತ್ತು. ಸೆಲ್ಫಿ ತೆಗೆದುಕೊಳ್ಳುವದನ್ನು ನಿಲ್ಲಿಸಿ ಮಾತನಾಡುತ್ತಿದ್ದರೆ ಅವರ ಮಾತುಗಳಲ್ಲಿ ಸತ್ಯಸಂಗತಿ ಇರಬೇಕೆಂದು ನಾನೂ ಅವರೊಂದಿಗೆ ಸೇರಿಕೊಂಡೆ. ಮನಿ ಕೆಲಸಾನೆ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸಿ ನಾನಷ್ಟು ನಾಷ್ಟಾ ಮಾಡಿ ಒಂದು ಕವನ ಬರೀಬೇಕು ಅನ್ನುವಷ್ಟರಲ್ಲಿ ನಮ್ಮತ್ತೆ ಮಾವಂದು ಅದು ಕೊಡು ಇದು ಕೊಡು ರಗಳೆ…
ಅವರಿಗೆ ಮಧ್ಯಾಹ್ನ ಊಟ ಬಡಿಸಿ ನಾನಷ್ಟು ಕುಂದುರುದಾಗ ಸಾಲಿಯಿಂದ ಮಕ್ಕಳು ಬಂದಿರತಾರ. ಮತ್ತ ಅವರ ಹೋಂವರ್ಕ್, ಸಂಜಿ ಅಡುಗಿ ಇನ್ನೇನ ಎರು ಮೊಕ್ಕೊಂಡಾರ ರಾತ್ರೀನರ ಒಂದಿಟು ಬರಿಬೇಕಂದ್ರ… ಹೇ ಲೈಟ್ಬಂದ್ಮಾಡು. ಬೆಳಕಿಗಿ ನಿದ್ದಿ ಬರಾಂಗಿಲ್ಲ ಅಂತ ಯಜಮಾನರ ಕ್ಯಾತೆ. ಸರಿ ಅಂತ ಅಲ್ಲಿ ಲೈಟಆರಿಸಿ ಡೈನಿಂಗ್ಹಾಲಿಗಿ ಬಂದು ಬರೀತೀನಿ. ಸುತ್ತುಮುತ್ತಲ ಕತ್ತಲ ಭಯ ಬ್ಯಾರೆ. ಇಂಥದ್ರೊಳಗ ನಿದ್ದಿಗೆಟ್ಟು ಕತೀನೋ ಕವನಾನೋ ಬರದ್ರ… ಮನಿಯೊರಿಗಿ ಒಂದಿಷ್ಟರ ಓದ್ಬೇಕು ಅಂತ ಅನ್ನಸಬೇಕಲ್ಲ… ನಾ ಏನ್ ಬರಿತೀನಿ ಅಂತನ.. ಗೊತ್ತಿಲ್ಲ ಅವರಿಗೆ.
ಸೇಮ್ಕತಿ ನಂದುನೂ. ನಾ ಕೆಲಸಕ್ಕ ಹೋಗ್ತೀನಿ ಅನ್ನೂ ಕಾರಣಕ್ಕ ಬಸ್ಸಿನ್ಯಾಗರ ಒಂದಿಟು ಬರ್ಯಾಕ ಟೈಮ್ ಆಗ್ತೈತಿ. ಇನ್ನ ಆಫೀಸಿಗಿ ಹೋದ್ನಿ ಅಂದ್ರ ಇಕಿ ಆಫೀಸ್ಕೆಲಸ ಬಿಟ್ಟು ಏನರ ಬರಿತಾಳೇನು ಅಂತ ಅಕ್ಕಪಕ್ಕದವರ ಕಣ್ಣು ನನ್ನ ಮ್ಯಾಲೆನ. ಬಾಸ್ಗ ಏನಾರ ಚಾಡ ಹೇಳಿ ಮತ್ತಷ್ಟು ಕೆಲಸ ಹೆಂಗ ಹಚ್ಬೇಕು ಅಂತ ವಿಚಾರ ಮಾಡ್ತಿರ್ತಾರ. ನಂದು ರಾತ್ರಿ ಜಾಗರಣಿಯೊಳಗ ಬರದಂತವುಗಳ. ಏನ್ಮಾಡೂದು ಹಿತ್ತಲಗಿಡ ಮದ್ದಲ್ಲ ಅನ್ನೂವಂಗ ನಮ್ಮೂ ಕವನಗಳು ನಮ್ಮ ಮನಿಯೊರಿಗೆನ ಇಷ್ಟ ಆಗಂಗಿಲ್ಲ. ಆದ್ರ ನಮ್ಮನಿಮ್ಮಂತ ಕವಿಗಳು ಓದಿ ಚೆಂದ ಐತಿ ಅಂತ ಹೇಳ್ತಾರಲ್ಲ ಅದ ಖುಷಿ ಅನ್ಸುತ್ತ.
ಅಲ್ಲ… ಅದ ಗಂಡುಮಕ್ಕಳು ಕವಿಗಳಾಗಿದ್ರು ಅಂದ್ರ ನಾವೆಷ್ಟೆಲ್ಲ ಸೇವಾ ಮಾಡ್ತಿದ್ವಿ. ಅವರ ಕೂತಲ್ಲಿಗೆ ಚಾ, ಊಟ ಎ. ನಮಗ ಅವೆ ಬ್ಯಾಡ ಬಿಡು ಪ್ರೀತಿಯಿಂದ ಎರಡು ಮಾತಾಡುದಿಲ್ಲ. ಇಕಿಗೇನು ಮಾಡಾಕ ಕೆಲಸಿಲ್ಲ. ಅದರಿಂದೇನು ಲಾಭ ಐತಿ. ಬರಿತಾಳಂತ… ಸುಮ್ಮನ ಮಕ್ಕಳುಮರೀನ ಚೆಂದಗ ನೋಡ್ಕೊಳ್ಳೂದು ಬಿಟ್ಟು ಊರೂರು ಕವಿಗೋಷ್ಠಿ ಅಂತ ತಿರಗ್ತಾಳಹಿಂಗ ನಮ್ಮತ್ತಿ ಓಣ್ಯಾಗೆಲ್ಲ ಹೇಳ್ಕೊಂಡು ಅಡ್ಡಾಡ್ತಾಳ. ಓಣಿಯವರು ನೋಡು ದೃಷ್ಟಿ ಹೆಂಗಿರ್ತತ ನೋಡ್ಬೇಕು… ಅಬ್ಬಬ್ಬಾ… ನಾವೇನೋ ತಪ್ಪು ಮಾಡಿ ಬಂದೀವಿ ಅನ್ನುತರ ನೋಡ್ತಿರ್ತಾರ. ಅದು ಕತ್ತಲಾಗಿತ್ತಂದ್ರ, ಎಲ್ಲಿ ಹೋಗಿದ್ರಿ, ಯಾಕ ಹೋಗಿದ್ರಿ, ಹೆಂಗ್ಬಂದ್ರಿ ನೂರೆಂಟು ಪ್ರಶ್ನೆಗಳು.
ಮನಿಯವ್ರಿಗೆ ನಾವು ಬರಿಯೋದನ್ನ ಬ್ಯಾಡ ಆಗಿರ್ತದ ನೋಡ್ರೀ… ಮಕ್ಕಳು, ಗಂಡ ಎರೂ ಕೂಡಿ ನಗಚಾಟಿ ಮಾಡ್ತಾರ. ಮಮ್ಮೀ ಅಡಗಿಯೊಳಗ ಒಂದಿಷ್ಟು ಉಪಮಾನ ಉಪಮೇಯ ಸೇರಿಸಿ ಮಾಡು. ನಿನ್ನ ಕವಿತೆಯಂಗ ಅಡುಗಿ ಆಗ್ಬೇಕು ನೋಡು ಲೇ… ಎ ಮಸಾಲೀನೂ ನಿನ್ನ ಕತಿ ಕವನಗಳಿಗೆ ಸೇರಿಸಿದೇನು. ಅಡುಗೀಗಿ ಒಂದಿಷ್ಟರ ಸೇರಿಸಬೇಕಾಗಿತ್ತ ನೋಡು. ಅಲ್ಲ ನಿನ್ನ ಮನಸ್ಸು ಕತಿಯೊಳಗ ಹೋದ್ರ. ನಮ್ಮ ಹೊಟ್ಟಿ ಕತಿ ಏನುಹಿಂಗ ಹೆಂಗರ ಕಾಡ್ತಾರೀ… ಅದ ನಾನಿಷ್ಟು ಅಡುಗಿ ಮಾಡಾಕ ಸಹಾಯ ಮಾಡ್ಲೇನು ಅಂತ ಒಬ್ರರ ಬರಬೇಕು. ಬರುದಿಲ್ಲ ಬಿಡ್ರಿ. ನಮಗೂ ಏನರ ಇಷ್ಟಾ ಬಂದಂಗ ಇರಾಕ ಬಿಟ್ಟಿದ್ರ ನಾವು eನಪೀಠ ತಗೊಳ್ಳುವಂಗ ಬರಿಬಹುದಾಗಿತ್ತು ಅಲ್ರೀ
ಹೌದಾ ಬಿಡ್ರಿ… ಪ್ರತಿಯೊಬ್ರು ಎಷ್ಟೆಷ್ಟೋ ಕಷ್ಟ ಬಿದ್ದು ಏನಾರ ಬರುದ್ರ ಮತ್ತ ಬುಕ್ಪ್ರಿಂಟ್ಮಾಡಿದ್ರ… ಅಡುಗೆ ಮನಿ ಸಾಹಿತ್ಯ ಅಂತ ಮೂಗು ಮುರಿತಾರಲ್ರೀ ಈ ಗಂಡಸರು. ಪುಸ್ತಕದ ಅಂಗಡಿಯೊಳಗ ಹೆಣ್ಮಕ್ಕಳು ಬರೆದ ಪುಸ್ತಕಕ್ಕ ಒಂದಿಷ್ಟರ ಗಂಟು ಬೀಳ್ತಾರೇನ್ರೀ ಓದವ್ರು… ಯಾಕಾರ ಬರೀಬೇಕು ಅನ್ಸುವಂಗ ವರ್ತಸ್ತಾರ. ಇಲ್ಲೀನೂ ಸ್ತ್ರೀ ಪುರುಷ ಬೇಧ… ಮಹಿಳಾ ಸಾಹಿತ್ಯವನ್ನ ಓದೋರು, ಪ್ರೋತ್ಸಾಹ ಮಾಡೋರು ಎ ನೂರುಕ್ಕ ಒಬ್ರ ನೋಡ್ರೀ ಮತ್ತ ಮೂರೊತ್ತು ಅಡಗಿಮನಿಯೊಳಗ ಇದ್ದು ಬರದ್ರ ಅಡುಗಿ ಮನಿ ವಿಷಯಾನ ಬರಿತೀವಿ. ಅದನ್ನ ಬಿಟ್ಟು ಹೊರಗಿನ ಪ್ರಪಂಚದಾಗ ಅಡ್ಡಾಡಬೇಕು. ತಿಳಕೋಬೇಕು. ಆಗ ಬ್ಯಾರೆ ರೀತಿಯೊಳಗ ಬರೀಬಹುದೇನೋ… ನಾವು ಸ್ವಲ್ಪ ಬದಲಾಗ್ಬೇಕ್ರೀ
ನಮಗೆಲ್ಲಿ ಒಂಟಿಯಾಗಿ ಹೊರಗ ತಿರಗಾಡು ಪರಿಸ್ಥಿತಿ ಐತಿ ಹೇಳ್ರೀ… ಒಂದಿಟು ಮಾರ್ಕೆಟ್ಟಿಗೆ ಒಬ್ಬಾಕಿ ಹೊಂಟ ನಿಂತ್ರ ನೂರಾ ಎಂಟು ಕಲ್ಪನೆ ಮಾಡ್ಕೊಂಡು ಮಾತಾಡ್ತಾರ. ಇನ್ನ ಗುಡ್ಡದ ಮ್ಯಾಲಿ, ನದಿ ಸಮುದ್ರದ ದಂಡಿಗೆ ಒಬ್ರೂನ ಹೋಗಾಕ ಬಿಡ್ತಾರೇನ್ರಿ. ಹಂಗೇನರ ಮಂಡ ಧೈರ್ಯ ಮಾಡಿ ಹೋದೀವಿ ಅಂದ್ರ ಅಂಥವ್ರಿಗೆ ತಲಿ ಸರಿ ಇ ಅನ್ನೋ ಪಟ್ಟಾ ಕಟ್ತಾರ. ನಮ್ಮನಿಯೊಳಗ ಇದ್ದು ಸಾಧನೆ ಮಾಡಬೇಕು. ಅಂಥ ಪರಿಸ್ಥಿತಿ ನಮ್ದು… ಖರೇನ ಗಂಡಸರಾಗಿ ಯಾಕ ಹುಟ್ಲಿಲ್ಲ ಅಂತ ನಮ್ಮ ಬಾಳಮಂದಿ ಕವಯತ್ರಿಯರಿಗೆ ಅನ್ನಿಸೈತಿ ಅನ್ರೀ..
ಹೀಗೆ ಮಹಿಳಾಮಣಿಯರ ಮಾತುಕತೆಗಳು ಸಾಗಿದ್ದವು. ಅದರೊಳಗೆ ಮನೆಯಿಂದ, ಹೇ… ಎಲ್ಲಿದಿ ಜಲ್ದಿ ಬರಾಕ ಬರಂಗಿಲ್ಲ. ಮನೀಗಿ ನಮ್ಮ ಸಂಬಂಧಿಕರು ಬರಾಕತ್ತಾರ, ಮಮ್ಮೀ.. ನೀ ಬರೂ ಮಟ ಊಟ ಮಾಡಂಗಿಲ್ಲ ನೋಡು. ಬಾ ಜಲ್ದೀ… ಇನ್ನೂ ನೂರೆಂಟು ಫೋನ ಕರೆಗಳು ಬರುತ್ತಲೇ ಹೋದವು. ಬಡವನ ಸಿಟ್ಟು ದವಡಿ ಮ್ಯಾಲಿ ಅಂದಂಗ ಕವಯತ್ರಿಯರ ಸಿಟ್ಟು ಬರೀ ಮಾತಿನ್ಯಾಗ ಎಂಬಂತೆ ಎಲ್ಲರೂ ಅವಸರದಲ್ಲಿ ತಮ್ಮ ಊರುಗಳತ್ತ ಮುಖ ಮಾಡಿದರು.
– ಗಂಗಾದೇವಿ ಚಕ್ರಸಾಲಿ
ಶಿಕ್ಷಕಿ, ಸಾಹಿತಿ