Menu

ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಚನ್ನಪಟ್ಟಣ ಕ್ಷೇತ್ರದ ಚಿತ್ರಣ ಬದಲು: ಡಿಕೆಶಿ

ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್  ಮಾತನಾಡಿದರು. ನೀವು ನಮಗೆ ಕೊಟ್ಟ ಶಕ್ತಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮ ಮಾಡಿದ್ದೇವೆ. ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು 2 ಬಾರಿ ಮುಂದೂಡಲಾಗಿತ್ತು.  ಮುಖ್ಯಮಂತ್ರಿಗಳ ಕಾಲಿಗೆ ಪೆಟ್ಟಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದರು.

ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ನಾಯಕರು, ಮಂತ್ರಿಗಳು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಅಭಿವೃದ್ಧಿಗೆ ಮತ ಕೊಟ್ಟಿದ್ದೀರಿ.  ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲಿಸಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ಬಳಿಕ  ಕ್ಷೇತ್ರದ ಪ್ರತಿ ಹೋಬಳಿಗೆ ಬಂದು ಮನೆ ಬಾಗಿಲಿಗೆ ಸರ್ಕಾರವನ್ನು ತಂದು 25 ಸಾವಿರಕ್ಕೂ ಹೆಚ್ಚು ಜನರ ಅರ್ಜಿ ಸ್ವೀಕರಿಸಿದ್ದೇನೆ. 19 ಸಾವಿರಕ್ಕೂ ಹೆಚ್ಚು ಜನ ಮನೆ, ನಿವೇಶನ, ಪಹಣಿ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದೀರಿ. ಚುನಾವಣೆಗೂ ಮುನ್ನ ಈ ಕ್ಷೇತ್ರ ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದೆ. ನಾನು,  ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ, ರವಿ, ರಾಮೋಜಿ ಗೌಡ ಸೇರಿ ಡಿ.ಕೆ. ಸುರೇಶ್ ಅವರ ಸಹಕಾರದಲ್ಲಿ ಜಿಲ್ಲೆಯಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದರು.

ಸುರೇಶ್ ಅವರ ಸವಾಲನ್ನು ನಾಲ್ಕು ಶಾಸಕರು ಸ್ವೀಕರಿಸುತ್ತೇವೆ:  ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ನಾವು ಜ್ಯೋತಿ ಬೆಳಗುವಾಗ, ನೀವು ನಾಲ್ಕು ಜನ ಶಾಸಕರು ಸೇರಿ ಏನು ಸಾಧನೆ ಮಾಡುತ್ತೀರಿ ನೋಡುತ್ತೇವೆ ಎಂದು ಸುರೇಶ್ ಸವಾಲು ಹಾಕಿದ್ದಾರೆ. ನಾವೆಲ್ಲರೂ ಶಾಸಕರು ಸೇರಿ ಈ ಸವಾಲು ಸ್ವೀಕರಿಸಬೇಕು ಎಂದರು.

“ಚನ್ನಪಟ್ಟಣದ ಮತದಾರರಿಗೆ ಮಂಕು ಬೂದಿ ಎರಚಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದೀರಿ. ನಮ್ಮ ಮೇಲೆ ಹಾಗೂ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದೀರಿ. ಈ ಕ್ಷೇತ್ರಕ್ಕೆ ಈಗಾಗಲೇ 600 ಕೋಟಿ ರೂಪಾಯಿ ಅನುದಾನ ತಂದು ಕೆಲಸ ಆರಂಭಿಸಿದ್ದೇವೆ. ಚುನಾವಣೆಗೆ ಬಂದಾಗ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ ಎಂದು ಹೇಳಿದರು.

ಹಾಲು ಉತ್ಪಾದಕರ ಸಮಸ್ಯೆ ನಮ್ಮ ಗಮನದಲ್ಲಿ ಇದೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇವೆ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದೀರಿ. ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನು ಗುರುತಿಸಲಾಯಿತು. ಸಚಿವ ಜಮೀರ್ ಅಹಮದ್ ಖಾನ್ ರವರು 5 ಸಾವಿರ ಮನೆಗಳನ್ನು ಮಂಜೂರು ಮಾಡಿದರು. ಇವುಗಳನ್ನು ಹಂಚುವ ಕೆಲಸ ಮಾಡುತ್ತೇವೆ. ನೀವು ಅಧಿಕಾರಿಗಳಿಗೆ ಲಂಚ ನೀಡಲು ನಾನು ಹಾಗೂ ಯೋಗೇಶ್ವರ್ ಬಿಡುವುದಿಲ್ಲ ಎಂದರು.

ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ. ಸುರೇಶ್ ಅವರು ಸ್ಪರ್ಧಿಸಲು ಒತ್ತಡ ಇತ್ತು.  ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನ ಮಾಡಿದೆ ಎಂದು ಶಿವಕುಮಾರ್‌ ಹೇಳಿದರು.

Related Posts

Leave a Reply

Your email address will not be published. Required fields are marked *