ತೆಲಂಗಾಣದ ಭ್ರಷ್ಟ ಅಧಿಕಾರಿಯೊಬ್ಬರ ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಯಲಿಗೆಳೆದಿದೆ. ಹೈದರಾಬಾದ್ ಮತ್ತು ಕರ್ನಾಟಕಗಳಲ್ಲಿ 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟು ಅಕ್ರಮ ಆಸ್ತಿಯ ನಿಜವಾದ ಮೌಲ್ಯ ಮಾರುಕಟ್ಟೆ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಎಸಿಬಿ ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಂಕೀರೆಡ್ಡಿ ಭೀಮ್ ರೆಡ್ಡಿ ಅವರ ಮನೆ, ಕಚೇರಿ, ಸ್ನೇಹಿತರು ಮತ್ತು ಬೇನಾಮಿಗಳಿಗೆ ಸೇರಿದ 16 ಸ್ಥಳಗಳಲ್ಲಿ ಜುಲೈ 2 ರಂದು ಏಕಕಾಲಕ್ಕೆ ಶೋಧ ನಡೆಸಿದೆ.
ಸೇವಾ ಅವಧಿಯಲ್ಲಿ ಭೀಮ್ ರೆಡ್ಡಿ ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಮಾರ್ಗಗಳ ಮೂಲಕ ಅಧಿಕೃತ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ. ಭೀಮ್ ರೆಡ್ಡಿ ಅವರ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಹೈದರಾಬಾದ್‌ನ ದುಬಾರಿ ಪ್ರದೇಶಗಳಾದ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಮತ್ತು ತೆಲ್ಲಾಪುರದಲ್ಲಿ ಐಷಾರಾಮಿ ವಿಲ್ಲಾಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಹಲವು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಜಿ+2 ಅಂತಸ್ತಿನ ಪೆಂಟ್‌ಹೌಸ್ ಮತ್ತು 3,000 ಚದರ ಅಡಿಯ ವಾಣಿಜ್ಯ ಮಳಿಗೆಗಳೂ ಇವೆ.
ಹೈದರಾಬಾದ್ ಸುತ್ತಮುತ್ತಲಿನ ಓಪನ್ ಪ್ಲಾಟ್‌ಗಳ ಜೊತೆಗೆ ಕರ್ನಾಟಕದಲ್ಲಿ 44 ಎಕರೆ ಮತ್ತು ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಸೇರಿದಂತೆ ಒಟ್ಟು 50 ಎಕರೆಗೂ ಅಧಿಕ ಕೃಷಿ ಭೂಮಿ ಹೊಂದಿರುವ ದಾಖಲೆಗಳು ಲಭಿಸಿವೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಡಿಎಸ್‌ಪಿ ಭೀಮ್ ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಅಧಿಕಾರಿಯು ಹೈದರಾಬಾದ್‌ನ ಇಬ್ರಾಹಿಂಬಾಗ್‌ನ ವೆಸ್ಸೆಲ್ಲಾ ಮೆಡೋಸ್‌ನಲ್ಲಿ ಒಂದು ವಿಲ್ಲಾ, ಟೆಲಿಕಾಂ ನಗರದಲ್ಲಿ ಜಿ+2+ಪೆಂಟ್‌ಹೌಸ್ ವಸತಿ ಮನೆ, ಟೆಲಿಕಾಂ ನಗರದ ಸಾಯಿ ಪ್ರಭಾ ರೆಸಿಡೆನ್ಸಿಯಲ್ಲಿ ಒಂದು ಫ್ಲಾಟ್.
ಗಚಿಬೌಲಿಯ ಕ್ರಾಂತಿ ಸಿಯೋನ್ ಅಪಾರ್ಟ್‌ಮೆಂಟ್‌ನ ಒಂದು ಫ್ಲಾಟ್, ಮಣಿಕೊಂಡದ ಲಂಕೋಹಿಲ್ಸ್ ರಸ್ತೆಯಲ್ಲಿರುವ 500 ಚದರ ಯಾರ್ಡ್ ವಿಸ್ತೀರ್ಣದ ಜಿ+5 ವಾಣಿಜ್ಯ ಸಂಕೀರ್ಣದಲ್ಲಿ ಪಾಲು ಹೊಂದಿದ್ದಾರೆ.
ಮಣಿಕೊಂಡ ಮರ್ರಿಚೆಟ್ಟು ಜಂಕ್ಷನ್ ಬಳಿ 3000 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಮಳಿಗೆ, ತೆಲ್ಲಾಪುರದ ಅಭಿನಂದ ರೆಸಿಡೆನ್ಸಿಯಲ್ಲಿರುವ ಎರಡು ವಸತಿ ಫ್ಲಾಟ್‌ಗಳು, ಪ್ರಗತಿ ರಿಸಾರ್ಟ್ಸ್‌ನಲ್ಲಿ 500 ಚದರ ಯಾರ್ಡ್‌ನ ಮುಕ್ತ ನಿವೇಶನ, ಸಂಗಾರೆಡ್ಡಿಯ ಜಹೀರಾಬಾದ್‌ನಲ್ಲಿ 3.5 ಎಕರೆ ಕೃಷಿ ಭೂಮಿ, ಕರ್ನಾಟಕದಲ್ಲಿರುವ 6-00 ಎಕರೆ ಕೃಷಿ ಭೂಮಿ ಇವರದಾಗಿದೆ.
ಕರ್ನಾಟಕದಲ್ಲಿ ಒಂದು ಕಡೆ 38 ಎಕರೆ ಕೃಷಿ ಭೂಮಿ, ದೇವನಹಳ್ಳಿಯಲ್ಲಿ ಒಂದು ಎಕರೆ ಜಮೀನು, ನಾಗೋಲದ ಕಾಮಿನೇನಿ ಆಸ್ಪತ್ರೆ ಬಳಿ 200 ಚದರ ಯಾರ್ಡ್‌ನ ಮುಕ್ತ ನಿವೇಶನ, ಜಿಪಿಆರ್ ಹೌಸಿಂಗ್ ಸೊಸೈಟಿ ಬಳಿ ಇರುವ 400 ಚದರ ಯಾರ್ಡ್‌ನ ನಿವೇಶನ, ಪಟಾನ್‌ಚೆರುನಲ್ಲಿ ಆಸ್ತಿ, ಪಟಾನ್‌ಚೆರುನಲ್ಲಿರುವ 200 ಚದರ ಯಾರ್ಡ್‌ನ ಮುಕ್ತ ನಿವೇಶನ, ವಿಕಾರಾಬಾದ್‌ನ ಮೊಮಿನ್‌ಪೇಟೆಯಲ್ಲಿ 1,000 ಚದರ ಯಾರ್ಡ್ ವಿಸ್ತೀರ್ಣದ ಜಮೀನು, ವಿಕಾರಾಬಾದ್‌ನ ಮೊಮಿನ್‌ಪೇಟೆಯಲ್ಲಿ 2 ಎಕರೆ ಕೃಷಿ ಭೂಮಿ, ಮೆಸರ್ಸ್ ಶ್ರೀ ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್ ಕಂಪನಿಯಲ್ಲಿ 75 ಲಕ್ಷ ರೂ. ಹೂಡಿಕೆ, ಸಿಸಿ ಕುಂಟಾದ ಮುಚಿಂತಲ ಗ್ರಾಮದಲ್ಲಿರುವ 4-20 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಭೀಮ್ ರೆಡ್ಡಿಗೆ ಸೇರಿದ್ದಾಗಿದೆ.
ಮನೆಯಲ್ಲಿ 3.60 ಲಕ್ಷ ನಗದು ಮತ್ತು ಬೇನಾಮಿ ಮನೆಯಲ್ಲಿ 40 ಲಕ್ಷ ನಗದು ಪತ್ತೆಯಾಗಿದೆ. ಎರಡು 2 ಕೆಜಿ ಚಿನ್ನದ ಆಭರಣಗಳು, 20 ಕೆಜಿ ಬೆಳ್ಳಿ ವಸ್ತುಗಳು ಮತ್ತು ವಿವಿಧ ಖಾತೆಗಳಲ್ಲಿದ್ದ ಒಟ್ಟು 19 ಲಕ್ಷದ 91 ಸಾವಿರ ಬ್ಯಾಂಕ್ ಬ್ಯಾಲೆನ್ಸ್ ಸಿಕ್ಕಿದೆ. ದಾಖಲೆಗಳಲ್ಲಿ ನಮೂದಾಗಿರುವ ಈ ಎಲ್ಲಾ ಸ್ಥಿರ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ದಾಖಲೆಗಳ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿರಬಹುದು ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.


