Menu

ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ : ಎಚ್.ಎಂ.ರೇವಣ್ಣ

ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಗ್ಯಾರಂಜಿ ಅನುಷ್ಠಾನ ಚುನಾವಣೆ ಗಿಮಿಕ್ ಅಲ್ಲ. ಜನರ ಅಭಿವೃದ್ಧಿ ದೂರದೃಷ್ಟಿಯನ್ನು ಗಮನದಲ್ಲಿರಿಸಿ ಜಾರಿ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಜಿಲ್ಲಾ ಸಮಿತಿಯ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮ ದೇಶದ ಬಡವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿತು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್  ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆ ಜಾರಿ ಮಾಡಿ ಭೂ ರಹಿತರಿಗೆ ಭೂಮಿ ಹಕ್ಕು ದೊರಕಿಸಿಕೊಟ್ಟು ಶೋಷಿತರ ನಾಯಕರಾದರು ಎಂದು ಹೇಳಿದರು.

ಶಕ್ತಿ ಯೋಜನೆಯಡಿ 377 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ರು.9,124 ಕೋಟಿ ಖರ್ಚು ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ 1.2 ಕೋಟಿ ಮಹಿಳೆಯರು ನೋಂದಣಿಯಾಗಿದ್ದು, ಇವರಿಗೆ ಪ್ರತಿ ತಿಂಗಳು 2000 ರೂ. ಡಿಬಿಸಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದಕ್ಕಾಗಿ 35,608 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ 11,810 ಕೋಟಿ ವ್ಯಯಿಸಲಾಗಿದೆ. ಯುವನಿಧಿ ಯೋಜನೆಯಡಿ 2.14 ಲಕ್ಷ ಫಲಾನುಭವಿಗಳಿಗೆ 222 ಕೋಟಿ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ಗೆಲ್ಲಿಸಿದರು. ಅಧಿಕಾರಕ್ಕೆ ಬಂದ 3 ತಿಂಗಳ ಒಳಗೆ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು ಎಂದರು.

Related Posts

Leave a Reply

Your email address will not be published. Required fields are marked *