ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಏನು ಕೊಡುಗೆ ಸಿಕ್ಕಿದೆ ಎಂದು ಕೇಂದ್ರ ಮಂತ್ರಿಗಳು, ರಾಜ್ಯದ ಬಿಜೆಪಿ ಸಂಸದರು ಉತ್ತರ ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಡಿಸಿಎಂ ಪ್ರತಿಕ್ರಿಯೆ ನೀಡಿ, ದೇಶದಲ್ಲಿಯೇ ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಐಟಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ. ಚುನಾವಣೆಗಳು ಹತ್ತಿರವಿಲ್ಲದ ಕಾರಣಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಅನ್ನಿಸುತ್ತದೆ. ರಾಜ್ಯಕ್ಕೆ ಏನಾದರು ಲಾಭ ಆಗಿದೆಯೇ ಎಂದು ರಾಜ್ಯವನ್ನು ಪ್ರತಿನಿಧಿಸುವವರು ಹೇಳಬೇಕು ಎಂದು ಕುಟುಕಿದ್ದಾರೆ.
12 ಲಕ್ಷ ಆದಾಯ ಮಿತಿ ಇರುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಕಡಿಮೆ ಜನಕ್ಕೆ ಲಾಭವಾಗಲಿದೆ. ದೇಶದ ಶೇ 5 ರಷ್ಟು ಜನ, ಸರ್ಕಾರಿ ಉದ್ಯೋಗ ಇರುವವರು ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ತೆರಿಗೆ ಸ್ಲಾಬ್ ಅನ್ನೇ ತೆಗೆದು ಹಾಕಬೇಕಾಗಿತ್ತು, ಅದು ಆಗಿಲ್ಲ ಎಂದರು.
ಯಾವ ಕ್ಷೇತ್ರಕ್ಕೂ ಬಜೆಟ್ ನಿಂದ ಅನುಕೂಲವಾಗಿಲ್ಲ. ಕೃಷಿ ಉದ್ಯೋಗ ಹೇಳಿದಂತೆ ಮೂಲಸೌಕರ್ಯಕ್ಕೂ ಉಪಯೋಗವಾಗಿಲ್ಲ. ಬೆಂಗಳೂರಿಗೆ ಅನುದಾನ ಅವಶ್ಯಕತೆ ಇತ್ತು. ವಾಜಪೇಯಿ ಅವರ ಕಾಲದಲ್ಲಿ ಇಡೀ ದೇಶವನ್ನು ಬೆಂಗಳೂರು ಮುಖಾಂತರ ನೋಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಕಳೆದ ಬಾರಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಮಾಡಿದ್ದರು. ಇದನ್ನು ಕೊಟ್ಟರೇ ಎಂದು ಪ್ರಶ್ನಿಸಿದ ಡಿಕೆಶಿ, ನಾವು ಈ ಮೊದಲೇ ಪ್ರಧಾನಮಂತ್ರಿಗಳಿಗೆ ಹಾಗೂ ವಿತ್ತ ಸಚಿವರಿಗೆ ಕರ್ನಾಟಕದ ಅವಶ್ಯಕತೆಗಳ ಬಗ್ಗೆ ಮನವಿ ಮಾಡಿದ್ದೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಗೆಲ್ಲುವ ವಿಶ್ವಾಸ: ದೆಹಲಿಯ ಮತದಾರರ ನಡೆ ಗೌಪ್ಯವಾಗಿದೆ. ನಮ್ಮ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಬಹಳ ವಿಶ್ವಾಸದಿಂದ ಇದ್ದಾರೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಾ ಇದ್ದಾರೆ. ಪ್ರಿಯಾಂಕಾ ಗಾಂಧಿ ಇರುವ ಕ್ಷೇತ್ರದಲ್ಲಿ ದೊಡ್ದ ಮಟ್ಟದಲ್ಲಿ ಜನ ಸೇರುತ್ತಾ ಇದ್ದಾರೆ. ರಾಹುಲ್ ಗಾಂಧಿ ಅವರು ಹೋದ ಕಡೆಯಲ್ಲೂ ಹೆಚ್ಚಿನ ಜನ ಸೇರುತ್ತಾ ಇದ್ದಾರೆ. ಇದೆಲ್ಲ ನೋಡಿದರೆ ಹೆಚ್ಚಿನ ವಿಶ್ವಾಸ ಮೂಡುತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಮುಂದಿನ ನವೆಂಬರ್ 16- 17 ಹೊತ್ತಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎನ್ನುವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಆಗಾಗ ಜ್ಯೋತಿಷ್ಯ ಹೇಳುತ್ತಿರುತ್ತಾರೆ. ಇನ್ನು ಮುಂದೆ ಅವರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೇನೆ ಎಂದು ವ್ಯಂಗ್ಯವಾಡಿದರು.