Menu

 ಬೆಂಗಳೂರಿನ ಪರೋಪಕಾರಿ ರಾವ್ ಬಹದ್ದೂರ್‌ ಎಲೆ ಮಲ್ಲಪ್ಪ ಶೆಟ್ಟರು

ವಿಜಯನಗರದ ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ಲಕ್ಷ್ಮೀಧರಮಾತ್ಯನ ತಾಯಿ ಹಾಲನ್ನು ಕುಡಿಸುವಾಗ ಕಿವಿಯಲ್ಲಿ ಹೇಳಿದ ಮಾತು… ಕೆರೆಯಂ ಕಟ್ಟಿಸು, ಬಾವಿಯಂ ಸೆವೆಸು, ದೇವಾಗಾರಮಂ ಮಾಡಿಸು, ಜ್ವರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು… ಅಂದರೆ ಇದರ ಅರ್ಥ ಹೀಗಿದೆ: ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು. ನೂರಕ್ಕೆ ನೂರು ಇದನ್ನು ಪಾಲಿಸಿದ ಎಲೆಮಲ್ಲಪ್ಪಶೆಟ್ಟರು ನಿಜಕ್ಕೂ ಬೆಂಗಳೂರಿನ ರಾವ್ ಬಹದ್ದೂರ್.

ಬೃಹತ್ ಜಲಾಶಯಗಳು ಹಾಗೂ ಕೊಳವೆ ಬಾವಿಗಳು ಇಲ್ಲದಿದ್ದ ಕಾಲದಲ್ಲಿ ಜನರ ಜೀವನಾಡಿಯಾಗಿ ಇದ್ದವುಗಳೆಂದರೆ ಊರ ಮುಂದಿನ ಕೆರೆಗಳು. ಕೆರೆಗಳು ಹಾಗೂ ತೆರೆದ ಬಾವಿಗಳು ನಿತ್ಯದ ನೀರಿನ ಅವಶ್ಯಕತೆ ಪೂರೈಸುತ್ತಿದ್ದವು. ಕೆರೆ, ಕಲ್ಯಾಣಿ ಹಾಗೂ ಬಾವಿಗಳ ಇತಿಹಾಸ ಪುರಾತನವಾದದ್ದು.

ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಕೆರೆಗಳ ಸಂಖ್ಯೆ ಈಗ ಗಣನೀಯವಾಗಿ ಕುಸಿದಿದೆ. ಸಣ್ಣ ನೀರಾವರಿ ಇಲಾಖೆ ಅಂಕಿಅಂಶಗಳ ಅನುಸಾರ ರಾಜ್ಯದಲ್ಲಿ ಮೂವತ್ತಾರು ಸಾವಿರಕ್ಕಿಂತಲೂ ಹೆಚ್ಚು ಕೆರೆಗಳಿವೆ. ಕೆರೆಗಳ ಸಂರಕ್ಷಣಾ ಹಾಗೂ ಅಭಿವೃದ್ಧಿ ಪ್ರಾಧಿಕಾರ ಇದ್ದಾಗ್ಯೂ ನಗರಗಳು ಸುತ್ತುವರಿದಿರುವ ಕೆರೆ, ಕೆರೆಗಳನ್ನು ಸಂಪರ್ಕಿಸುವ ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳಲ್ಲಿ ಅಕ್ರಮವಾಗಿ ಒತ್ತುವರಿ ನಡೆಯುತ್ತಲೇ ಇದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ದಾಖಲೆಯಂತೆ ಬೆಂಗಳೂರು ನಗರದಲ್ಲಿ ಇರುವ ಕೆರೆಗಳ ಸಂಖ್ಯೆ ೨೧೧. ಇವುಗಳು ಕೆಲವು ವರ್ಷಗಳ ಹಿಂದಿನವರೆಗೂ ನಗರಕ್ಕೆ ನೀರಿನ ಪೂರೈಕೆ ತಾಣಗಳಾಗಿದ್ದವು. ಈಗ ಬೆಂಗಳೂರು ಜಲಮಂಡಳಿ ಕಾವೇರಿ-ಕಬಿನಿ ನದಿಗಳ ನೀರನ್ನು ಪಂಪ್ ಮೂಲಕ ಜನರಿಗೆ ಸರಬರಾಜು ಮಾಡುತ್ತಿದೆ. ಜಲಾಶಯಗಳ ಬಹುಪಾಲು ನೀರನ್ನು ಬೆಂಗಳೂರಿಗೇ ಕೊಟ್ಟರೆ ಅನ್ನದಾತರು ಏನು ಬೆಳೆಯಬೇಕು? ಹಾಗೂ ಮೈಸೂರು ಮಂಡ್ಯ ಭಾಗದ ಜನರ ಪರಿಸ್ಥಿತಿಯ ಕಥೆ ಏನು?

ಜಲಮೂಲಗಳನ್ನು ಸಂರಕ್ಷಿಸಿಕೊಳ್ಳದಿದ್ದರೆ ಭವಿಷ್ಯ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ನಗರವಾಸಿಗಳು ಜಲಮೂಲಗಳ ಸಂರಕ್ಷಣೆ, ನೀರಿನ ಶೇಖರಣೆ ಹಾಗೂ ನಿರ್ವಹಣೆಯಲ್ಲಿ ಜಾಗೃತರಾಗಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಬೀಳುವ ಮಳೆಯನ್ನು ಮಳೆಕೊಯ್ಲು ಮೂಲಕ ಸಂಗ್ರಹ ಮಾಡಿದರೆ ಸರಬರಾಜಿನ ಶೇ.೭೦ ಪ್ರಮಾಣದ ನೀರನ್ನು ಜಲಾಶಯಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.

ಇಂಥ ಸನ್ನಿವೇಶದಲ್ಲಿ  ಸಾರ್ವಜನಿಕರ ಉಪಯೋಗಕ್ಕಾಗಿ ಕೆರೆಗಳನ್ನು ಕಟ್ಟಿಸಿದವರಲ್ಲಿ ಒಬ್ಬರನ್ನು ಇಲ್ಲಿ ನೆನೆಯಲೇಬೇಕು. ಎಲೆಮಲ್ಲಪ್ಪಶೆಟ್ಟಿ ಕೆರೆಯು ಬೆಂಗಳೂರಿನಲ್ಲಿರುವ ದೊಡ್ಡಕೆರೆಗಳಲ್ಲಿ ಒಂದಾಗಿದೆ. ಇದು ನಗರದ ಪೂರ್ವಕ್ಕೆ ಕೃಷ್ಣರಾಜಪುರಂನ ಆವಲಹಳ್ಳಿಯಲ್ಲಿದೆ (ಅಂದಿನ ವೀರನಹಳ್ಳಿ). ೧೮೭೫-೮೦ರ ಅವಧಿಯಲ್ಲಿ ೨೬೦ ಎಕರೆ ಪ್ರದೇಶದಷ್ಟು ವಿಸ್ತೀರ್ಣದ ದೊಡ್ಡಕೆರೆಯನ್ನು ಕೊಡುಗೈದಾನಿ ಎಂದು ಹೆಸರಾಗಿದ್ದ ರಾವ್‌ಬಹದ್ದೂರ್ ಎಲೆಮಲ್ಲಪ್ಪಶೆಟ್ಟರು ಕಟ್ಟಿಸಿದರು. ಕೆರೆಯನ್ನು ಸೀಳಿಕೊಂಡೇ ಬೆಂಗಳೂರು-ಚೆನ್ನೈ ಹೆದ್ದಾರಿ ಹಾಯ್ದುಹೋಗುತ್ತದೆ.

೧೯ನೇ ಶತಮಾನ ಮುಗಿಯುವ ಸಮಯದಲ್ಲಿ ನಗರವು ತೀವ್ರ ಬರಗಾಲದಿಂದ ಬಳಲುತ್ತಿದ್ದಾಗ ಮಲ್ಲಪ್ಪಶೆಟ್ಟಿ ಎಂಬ ವೀಳ್ಯದೆಲೆ ವ್ಯಾಪಾರಿ ತನ್ನ ಸಂಪತ್ತಿನ ಹೆಚ್ಚಿನ ಭಾಗವನ್ನು ಮಳೆನೀರು ಕೊಯ್ಲು ಮಾಡಲು ಹಾಗೂ ಜನರ ಅಗತ್ಯತೆ ಪೂರೈಸಲು ಆವಲಹಳ್ಳಿಯಲ್ಲಿ ಕೆರೆ ನಿರ್ಮಿಸಲು ಉದಾರವಾಗಿ ದಾನ ಮಾಡಿದ. ದಾನಿಯ ಹೆಸರಿನಿಂದಲೇ ಕರೆಯಲ್ಪಡುವ ಎಲೆಮಲ್ಲಪ್ಪಶೆಟ್ಟಿ ಕೆರೆ ಅತಿಕ್ರಮಣಕ್ಕೆ ಒಳಗಾಗಿದೆ.

ಜಲಾನಯನ ಪ್ರದೇಶದಲ್ಲಿ ತಲೆ ಎತ್ತಿರುವ ಬಹುಮಹಡಿ ಕಟ್ಟಡಗಳು ನಿರಂತರವಾಗಿ ಸಂಸ್ಕರಿಸಿದ ಒಳಚರಂಡಿ ನೀರನ್ನು ನೇರವಾಗಿ ಕೆರೆಗೆ ಬಿಡುವುದರಿಂದ ಹಾಗೂ ಸುತ್ತಲಿನ ಕೈಗಾರಿಕೆಗಳು ಸಹ ತ್ಯಾಜ್ಯವನ್ನು ಕೆರೆಗೆ ಸುರಿಯಲಾರಂಭಿಸಿದ ಪರಿಣಾಮವಾಗಿ ಕುಲಷಿತವಾಯಿತು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶುದ್ಧೀಕರಿಸುವುದಕ್ಕಾಗಿ ಸಂಸ್ಕರಣಾ ಘಟಕ ನಿರ್ಮಿಸಿದೆ. ನೀರಾವರಿ ಉದ್ದೇಶಕ್ಕಾಗಿ ಸಂಸ್ಕರಿಸಿದ ನೀರನ್ನು ಸಮೀಪದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಆನೇಕಲ್‌ಗೆ ಸರಬರಾಜು ಮಾಡಲಾಗುತ್ತಿದೆ.

ರಾವ್‌ಬಹದ್ದೂರ್ ಎಲೆಮಲ್ಲಪ್ಪಶೆಟ್ಟಿಯವರು ೧೮೧೫-೧೮೮೭ರ ಕಾಲಘಟ್ಟದಲ್ಲಿ ಜೀವಿಸಿದ್ದರು. ಭೀಕರ ಬರಗಾಲದ ಕಾರಣ ದೊಡ್ಡಕೆರೆ ನಿರ್ಮಿಸಲು ಸಹಾಯ ಮಾಡಿದರಲ್ಲದೆ, ೧೮೮೦ರಲ್ಲಿ ಬೆಂಗಳೂರಿನ ಮೊದಲ ಹೆರಿಗೆ ಆಸ್ಪತ್ರೆ ಕಟ್ಟಲು ಹಣಕಾಸಿನ ನೆರವು ನೀಡಿದರು. ಅವರ ಜನೋಪಕಾರಿ ಕೆಲಸ ಗುರುತಿಸಿ “ರಾವ್ ಬಹದ್ದೂರ್” ಎಂಬ ಬಿರುದನ್ನು ಬ್ರಿಟಿಷ್ ಹಾಗೂ ಸಂಸ್ಥಾನದ ಸರ್ಕಾರ ನೀಡಿ ಗೌರವಿಸಿತು.

೧೮೭೬-೭೮ರ ಅವಧಿಯ ಎರಡು ವರ್ಷಗಳು ಮಹಾಕ್ಷಾಮ ಆವರಿಸಿತು. ಆ ಸಂದರ್ಭದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಕೆರೆಗಳು, ಬಾವಿಗಳು ಹಾಗೂ ಕೊಳಗಳು ಬತ್ತಿಹೋದವು. ಸಂಕಷ್ಟಕ್ಕೆ ಒಳಗಾದ ನಿವಾಸಿಗಳಿಗೆ ನೀರನ್ನು ಒದಗಿಸಲು ತಮ್ಮ ಸಂಪತ್ತಿನ ಬಹುಭಾಗ ನೀಡಿದ್ದಾರೆ. ಎರಡು ವರ್ಷಗಳ ಕಾಲ ದಿನನಿತ್ಯವೂ ಅನ್ನ ಮತ್ತು ಗಂಜಿ ವ್ಯವಸ್ಥೆ ಹಾಗೂ ಬೃಹತ್ ಕೆರೆಯ ನಿರ್ಮಾಣಕ್ಕೆ ಉದಾರವಾಗಿ ದಾನ ಮಾಡಿದರು. ಎರಡು ದಶಕಗಳ ಕಾಲ ಬೆಂಗಳೂರು ನಗರಕ್ಕೆ ಎಲೆಮಲ್ಲಪ್ಪಶೆಟ್ಟರ ಕೆರೆಯಿಂದಲೇ ನೀರು ಸರಬರಾಜು ಮಾಡಲಾಗುತಿತ್ತು.

ಕೆರೆ ನಿರ್ಮಾಣ ಪ್ರಗತಿಯಲ್ಲಿರುವಾಗ ಕೆಲಸಗಾರ ರೊಬ್ಬರು ಹೆರಿಗೆಯ ಸಮಯದಲ್ಲಿ ಮರಣ ಹೊಂದಿದ ಕಾರಣಕ್ಕೆ ಬೆಂಗಳೂರಿನಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ್ದರಿಂದ ಸುತ್ತಮುತ್ತಲಿನ ಮಹಿಳೆಯರಿಗೆ ಸಹಾಯ ವಾಗಲೆಂದು ೯೦ ಹಾಸಿಗೆಗಳ ಸುಸಜ್ಜಿತ ಮೊದಲ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ರೂ.೩೫,೦೦೦ ಆರ್ಥಿಕ ನೆರವಿನೊಂದಿಗೆ ನೃಪತುಂಗ ರಸ್ತೆಯಲ್ಲಿರುವ ಇಂದಿನ ಐಜಿಪಿ ಕಚೇರಿ ಸ್ಥಳದಲ್ಲಿ ನಿರ್ಮಿಸಲಾಯಿತು.  ೧೯೩೫ರಲ್ಲಿ ಸ್ಥಳಾಂತರಿಸಿ ಹಾಲಿ ವಾಣಿವಿಲಾಸ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲಾಗಿದೆ.

ಬಂಗಾರಪೇಟೆಯಲ್ಲಿ ಧರ್ಮಛತ್ರ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳು ಇವರ ಧನ ಸಹಾಯದಿಂದ ಆಗಿವೆ. ಸಾಮಾಜಿಕ ಕಾರ್ಯಗಳ ಜೊತೆಗೆ ಶೆಟ್ಟರು ಸಾಹಿತ್ಯ ಪ್ರೇಮಿಯೂ ಆಗಿದ್ದರು. ಬೆಂಗಳೂರಿನ ಪುರಾತನ ದೇವಾಲಯಗಳಾದ ಬಸವನಗುಡಿಯ ದೊಡ್ಡ ಬಸವೇಶ್ವರ, ಗವಿಪುರಂ ಗುಡ್ಡಹಳ್ಳಿಯ ಗವಿಗಂಗಾಧರೇಶ್ವರ, ಪ್ರಳಯಕಾಲ ವೀರಭದ್ರ ದೇವಾಲಯ, ಬೆಳ್ಳಿ ಬಸವೇಶ್ವರ ದೇವಸ್ಥಾನ ಹಾಗೂ ಹಲಸೂರು ಸೋಮೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಸಹಾಯ ಮಾಡಿದ್ದಾರೆ.

ಎಲೆಮಲ್ಲಪ್ಪಶೆಟ್ಟರು ೧೭೩೭ರಲ್ಲಿ ಮರಿಸಿದ್ದಪ್ಪಶೆಟ್ಟರು ಮತ್ತು ಚೆನ್ನಮ್ಮ ಇವರ ಮೂರನೇ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ವೃತ್ತಿ ಅಡಿಕೆ ಮತ್ತು ಎಲೆ ಮಾರಾಟ. ಅಬಕಾರಿ ಗುತ್ತಿಗೆದಾರರು ಸಹ ಆಗಿದ್ದರು. ಜಗಜ್ಯೋತಿ ಬಸವಣ್ಣನವರು ಮತ್ತು ಬಳ್ಳಾರಿಯ ಸಕ್ಕರೆ ಕರಡಪ್ಪನವರು ಇವರಿಗೆ ಬಾಲ್ಯದಿಂದಲೇ ಆದರ್ಶವಾಗಿದ್ದರಂತೆ.

ಬೆಂಗಳೂರು ನಗರದಲ್ಲಿ ಕೆರೆಗಳನ್ನು ನುಂಗಿ ನೀರು ಕುಡಿಯುತ್ತಿರುವ ಮಂದಿಗೆ ಇಂಥವರು ಆದರ್ಶವಾಗಲಿಲ್ಲ ಏಕೆ ಎಂಬುದು ನನಗೆ ಪ್ರಶ್ನೆಯಾಗಿ ಕಾಡುತ್ತಿದೆ. ಪ್ರಸ್ತುತ ಎಲೆಮಲ್ಲಪ್ಪಶೆಟ್ಟ ಅವರಂತವರು ನಗರದಲ್ಲಿ ನಾಲ್ಕಾರು ಜನರು ಇದ್ದಿದ್ದರೆ, ಬಹುಶಃ ಬೆಂಗಳೂರು ಕುಡಿಯುವ ನೀರಿಗೆ ದೂರದ ಜಲಾಶಯಗಳನ್ನು ಆಶ್ರಯಿಸದೆ ತನ್ನದೇ ಜಲಮೂಲಗಳಿಂದ ಹಾಗೂ ಮಳೆಕೊಯ್ಲು ಮೂಲಕ ಪೂರೈಸಿಕೊಳ್ಳಬಹುದಿತ್ತು.

ನಾವು ಕೆರೆಯನ್ನು ಕಟ್ಟಿಸದಿದ್ದರೂ ಪರವಾಗಿಲ್ಲ ತುಂಬಿದ ಕೆರೆಗೆ ತ್ಯಾಜ್ಯ ಸುರಿಯುವುದು, ಕೊಳಚೆ ನೀರನ್ನು ಬಿಡುವುದು, ಆಕ್ರಮವಾಗಿ ಒತ್ತುವರಿ ಮಾಡುವುದು, ನೀರು ನಿಲ್ಲದಂತೆ ಕೋಡಿಗಳನ್ನು ಒಡೆದು ಹಾಕುವುದನ್ನು ಮಾಡದೆ ಸಂರಕ್ಷಿಸೋಣ. ನಮ್ಮದು ಭಾಗೀರಥಿ, ಎಲೆಮಲ್ಲಪ್ಪಶೆಟ್ಟರಂತೆ ಅನೇಕ ಪುಣ್ಯವಂತರು ಹುಟ್ಟಿದ ಕನ್ನಡನಾಡು ಎಂಬುದನ್ನು ಮರೆಯುವುದುಂಟೆ?

– ಮಿರ್ಲೆ ಚಂದ್ರಶೇಖರ
ಸಾಹಿತಿ, ಅಂಕಣಕಾರ
ಮೊ: 9916129654

Related Posts

Leave a Reply

Your email address will not be published. Required fields are marked *