ಹೊಸದಾಗಿ ಆರಂಭಿಸಲಾಗುತ್ತಿರುವ 450 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,000 ಕೋಟಿ ರೂ. ದೀರ್ಘಾವಧಿ ಸಾಲ ನೀಡಲು ಮುಂದಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 500 ಕೋಟಿ ರೂ. ಅನುದಾನದೊಂದಿಗೆ ನವೋದಯ ಮಾದರಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಿದ್ದು, ಎಡಿಬಿ ಮೊದಲ ಬಾರಿಗೆ ರಾಜ್ಯದ ಶಿಕ್ಷಣ ಇಲಾಖೆಗೆ ಸಾಲ ಮಂಜೂರು ಮಾಡಿದೆ ಎಂದರು.
ಅನುದಾನದಲ್ಲಿ ಕೆಪಿಎಸ್ ಶಾಲೆಗಳಿಗೆ ನೂತನ ಕಟ್ಟಡ, ಮೈದಾನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು 6 ಕೋಟಿಯಿಂದ 8 ಕೋಟಿ ರೂ.ವರೆಗೆ ವ್ಯಯಿಸಲಾಗುವುದು. ಪಾಲಕರಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ– ಯುಕೆಜಿ ವಿಭಾಗ ಆರಂಭಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ತರಗತಿಗಳು ನಡೆಯುತ್ತಿವೆ ಎಂದು ಅವರು ವಿವರಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಟ್, ಸಿಇಟಿ ತರಬೇತಿ ನೀಡಲಾಗಿತ್ತು. ಈ ವರ್ಷದಿಂದ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ತರಬೇತಿಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.