Menu

ಅಪಘಾತದಲ್ಲಿ ಮಹಿಳೆಯ ಸಾಯಿಸಿ ಮನೆಯಿಂದ ಹಣ ದೋಚಿದ್ದವರ ಬಂಧನ

ಹಣಕ್ಕಾಗಿ ಮಹಿಳೆಯೊಬ್ಬರಿಗೆ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿ ಕೊಲೆಗೈದಿರುವ ಘಟನೆ ಏಪ್ರಿಲ್ 21ರಂದು ಬೆಂಗಳೂರಿನ ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಅಪಘಾತ ಎಂದು ಹೇಳಲಾಗಿತ್ತು. ಮಹಾಲಕ್ಷ್ಮಿ ಲೇಔಟ್ ಪೊಲೀಸರ ತನಿಖೆಯಿಂದಾಗಿ ವ್ಯವಸ್ಥಿತ ಕೊಲೆ ಎಂಬುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಚೇತನ್ ಮೃತ ಮಹಿಳೆ ವಿಜಯಲಕ್ಷ್ಮಿ ಬಳಿ ಸಾಲ ಪಡೆದಿದ್ದ ಹಾಗೂ ಆಕೆಯ ಬಳಿ ಹಣ, ಚಿನ್ನ ಇದೆ ಎಂಬುದನ್ನು ತಿಳಿದುಕೊಂಡಿದ್ದ. ಅಪಘಾತ ಮಾಡಿದವರು ರಕ್ಷಿಸುವಂತೆ ನಟಿಸಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಆಕೆಯ ಪರ್ಸ್‌ನಲ್ಲಿದ್ದ ಮನೆಯ ಕೀ ಕಳವು ಮಾಡಿದ್ದರು. ಪೊಲೀಸರಿಗೆ ದೂರು ಕೂಡ ನೀಡಿದ್ದರು.

ಆರೋಪಿ ಚೇತನ್ ಸ್ನೇಹಿತರೊಂದಿಗೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿ ಏಪ್ರಿಲ್ 21ರಂದು ವಿಜಯಲಕ್ಷ್ಮಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ರಾಕೇಶ್ ಎಂಬಾತ ಬೈಕ್‌ನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಅಲ್ಲಿಗೆ ಆಟೋದಲ್ಲಿ ಬಂದ ಇತರ ಆರೋಪಿಗಳು ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದಾರೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಆಕೆಯ ಮನೆಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದಾಗ ಅಕ್ಕಪಕ್ಕದ ಮನೆಯವರು ಪ್ರಶ್ನಿಸಿದ್ದಾರೆ. ಈ ವೇಳೆ ಆಧಾರ್ ಕಾರ್ಡ್ ಬೇಕೆಂದು ಸುಳ್ಳು ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಆರೋಪಿ ರಾಕೇಶ್ ಸಂಚಾರ ಪೊಲೀಸ್ ಠಾಣೆಗೆ ತೆರಳಿ, ಪರಿಚಯದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ನಾನೇ ಅವರನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ದೂರು ನೀಡಿದ್ದ.

ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅಸಲಿ ಕೃತ್ಯ ಬಯಲಾಗಿದೆ. ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಮೃತಪಟ್ಟಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮಂಜುನಾಥ್ ಎಂಬಾತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಪೊಲೀಸರು ಕೊಲೆ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *