ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಎರಡು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳಿವೆ. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದ್ರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್. ಇದರ ವೇಗ ಗಂಟೆಗೆ 300-350 ಕಿ.ಮೀ, ಪ್ರಯಾಣ ಅವಧಿ 2 ಗಂಟೆಗಳಿಗಿಂತ ಕಡಿಮೆ ಇರಲಿದೆ. ಹೀಗಾಗಿ ಐಟಿ, ಉದ್ಯಮ, ಪ್ರವಾಸೋದ್ಯಮ,ಚಿತ್ರರಂಗ ಉದ್ಯಮಕ್ಕೆ ಸಹಕಾರಿಯಾಗಿ ಪರಿಣಮಿಸಲಿದೆ.
ಬೆಂಗಳೂರು-ಹೈದ್ರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸಂಪರ್ಕಿಸುವ ಯೋಜನೆಯಾಗಿದೆ. ಇಲ್ಲಿ ಗಂಟೆಗೆ 300 ಕಿ.ಮೀ ವೇಗ ಇರಲಿದ್ದು, ಪ್ರಯಾಣ ಅವಧಿ 2 ಗಂಟೆಗಳು ಇರುತ್ತದೆ. ಎರಡೂ ನಗರಗಳ ಐಟಿ ಹಬ್‌ಗಳ ನಡುವಿನ ಸಂಪರ್ಕ ಉತ್ತಮಗೊಂಡು ಉದ್ಯಮ, ವ್ಯಾಪಾರ, ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಅರಣವಾಗಲಿದೆ. ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ.
ಬಜೆಟ್‌ನಲ್ಲಿ ಕರ್ನಾಟಕದ ಪರಿಸರ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ಕಲ್ಪಿಸಲಾಗಿದೆ. ಕರಾವಳಿ ಆಮೆಗಳ ಸಂತಾನೋತ್ಪತ್ತಿ ಉಳಿಕೆಗೆ ಯೋಜನೆ ಪ್ರಕಟಿಸಲಾಗಿದೆ. ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯ ಆಮೆ ಸಂತಾನೋತ್ಪತ್ತಿ ತೀರಗಳ ಸಂರಕ್ಷಣೆಗೆ ವಿಶೇಷ ನಿಧಿ ಮೀಸಲಿಡಲಾಗುತ್ತದೆ. ಆಮೆ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಹ್ಯಾಚರಿ ವ್ಯವಸ್ಥೆಯ ವಿಸ್ತರಣೆ ಮಾಡಲಾಗುತ್ತದೆ.
ಕರಾವಳಿ ಗ್ರಾಮಗಳಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಆಮೆ ಸಂರಕ್ಷಣಾ ಸ್ವಯಂಸೇವಕ ತಂಡಗಳ ರಚನೆ ಮಾಡಲಾಗುವುದು. ಪ್ಲಾಸ್ಟಿಕ್ ಮುಕ್ತ ತೀರಗಳ ಅಭಿಯಾನ ಮತ್ತು ದೀಪದ ಬೆಳಕು ಕಡಿಮೆ ಮಾಡುವ ವ್ಯವಸ್ಥೆಗೆ ಆದ್ಯತೆ , ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಮೂಲಕ ಆಮೆಗಳ ಟ್ರ್ಯಾಕಿಂಗ್ ವ್ಯವಸ್ಥೆ ಬಲಪಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕರಾವಳಿ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯಲಾಗುವ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಮೊದಲಾದ ಅಧಿಕ ಮೌಲ್ಯದ ಬೆಳೆಗಳಿಗೆ ಆದ್ಯತೆ ನೀಡುವ ಮೂಲಕ ಕರಾವಳಿ ಹಾಗೂ ಅರಣ್ಯ ಪ್ರದೇಶದ ರೈತರಿಗೆ ಅನುಕೂಲ ಮಾಡಲಾಗುತ್ತಿದೆ. ಈ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಸ್ಥಿರವಾಗಿ ಹೆಚ್ಚಿಸುವುದು, ಉತ್ಪಾದಕತೆ ವೃದ್ಧಿ ಹಾಗೂ ಮೌಲ್ಯ ಸರಪಳಿ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಇಳುವರಿ ಕಡಿಮೆಯಾಗಿರುವ ಹಳೆಯ ತೋಟಗಳನ್ನು ಆಧುನೀಕರಿಸಲು, ಹೆಚ್ಚಿನ ಸಾಂದ್ರತೆಯ ಕೃಷಿ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲು ಸರ್ಕಾರ ನೆರವು ನೀಡಲಿದೆ. 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋ ವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್‌ಗಳಾಗಿ ರೂಪಿಸಲಾಗುತ್ತದೆ. ಈ ಮೂಲಕ ರೈತರಿಗೆ ಉತ್ತಮ ಬೆಲೆ, ರಫ್ತು ಅವಕಾಶಗಳು ಹಾಗೂ ಸ್ಥಿರ ಆದಾಯ ಲಭ್ಯವಾಗಲಿದೆ ಎಂಬುದು ಸರ್ಕಾರ ನಿರೀಕ್ಷೆ.
ಶ್ರೀಗಂಧ ಪುನರುಜ್ಜೀವನ ಯೋಜನೆಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿ, ಶ್ರೀಗಂಧದ ವ್ಯವಸ್ಥಿತ ಕೃಷಿ, ಕಟಾವು ಮತ್ತು ಕಟಾವಿನ ನಂತರದ ಸಂಸ್ಕರಣೆಗೆ ಉತ್ತೇಜನ ನೀಡಲಿದೆ. ಒಣಹಣ್ಣು ಬೆಳೆಗಳ ಕೃಷಿಯನ್ನು ವಿಸ್ತರಿಸಲು ಯುವಜನರನ್ನು ಸೆಳೆಯುವ ವಿಶೇಷ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಈ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಒದಗಿಸುವ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.
ತಂತ್ರಜ್ಞಾನ ಚಾಲಿತ ಕೃಷಿಗೆ ಬಜೆಟ್‌ನಲ್ಲಿ ಕ್ರಮ ವಹಿಸಲಾಗಿದೆ. ರೈತರಿಗೆ ಕೃಷಿ ಮಾಹಿತಿ, ಮಾರುಕಟ್ಟೆ ದರಗಳು ಮತ್ತು ಹವಾಮಾನ ಮುನ್ಸೂಚನೆಗಳನ್ನು ಅವರದೇ ಭಾಷೆಯಲ್ಲಿ ನೀಡಲು ಬಹುಭಾಷಾ AI ಸಾಧನ ‘ಭಾರತ್ ವಿಸ್ತಾರ್’ ಕಾರ್ಯಾ ಚರಿಸಲಿದೆ.
ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸಲು 500 ಜಲಾಶಯಗಳು ಹಾಗೂ ಜಲಮೂಲಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ. ಸ್ಟಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ರೈತ ಉತ್ಪಾದಕ ಸಂಸ್ಥೆಗಳಿಗೆ ವಿಶೇಷ ಬೆಂಬಲ ನೀಡಲಾಗುತ್ತದೆ. ಪಶುಸಂಗೋಪನೆ ಕ್ಷೇತ್ರದಲ್ಲಿ ಡೈರಿ, ಕೋಳಿ ಮತ್ತು ಜಾನುವಾರು ಉದ್ಯಮಗಳ ಆಧುನೀಕರಣಕ್ಕೆ ಸಬ್ಸಿಡಿ ಯೋಜನೆ ಜಾರಿಗೊಳಿಸುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುತ್ತದೆ.


