ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿದೆ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶದ ಮೇರೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ ಐಟಿ ರಚಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್ಬಿ ಎಸಿಪಿ ರಾಮಚಂದ್ರ, ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ರವಿ ಕೂಡ ಈ ಎಸ್ಐಟಿ ತಂಡದಲ್ಲಿದ್ದಾರೆ.
ಆತ್ಮಹತ್ಯೆಗೆ ಐಟಿ ರೈಡ್ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಎಸ್ಐಟಿ ಈ ಕುರಿತು ಸಮಗ್ರ ತನಿಖೆ ನಡೆಸಲಿದೆ. ಅವರ ಮೊಬೈಲ್ ಫೋನ್ ಪರಿಶೀಲಿಸಿ, ಹಣಕಾಸು ವ್ಯವಹಾರಗಳು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯಲಿದೆ.
ಯುಡಿಆರ್ ಪ್ರಕರಣ ದಾಖಲು
ಉದ್ಯಮಿ ಸಾವಿಗೆ ನಿಖರ ಕಾರಣ ತಿಳಿದುಬರದ ಹಿನ್ನೆಲೆ ಅಶೋಕ ನಗರ ಪೊಲೀಸರು BNS 174ಸಿ ಅಡಿಯಲ್ಲಿ UDR (ಅನುಮಾನಾಸ್ಪದ ಸಾವು) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಿಜೆ ರಾಯ್ ಆತ್ಮಹತ್ಯೆಗೆ ಸಂಬಂಧ ತನಿಖೆ ನಡೆಸುವಂತೆ ಕಾನ್ಫಿಡೆಂಟ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎ ಜೋಸೆಫ್ ಅವರು ದೂರು ನೀಡಿದ್ದಾರೆ. ದೂರಿನಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಜೋಸೆಫ್ ಅವರು ಯಾವುದೇ ಆರೋಪ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಅಶೋಕ್ ನಗರ ಪೊಲೀಸರು ಅಸಹಜ ಸಾವು ಎಂದು ತನಿಖೆ ನಡೆಸುತ್ತಿದ್ದಾರೆ.


