ಬೆಂಗಳೂರು: ಮಲಗಿದ್ದ ಸ್ಥಿತಿಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಶಂಕಾಸ್ಪದವಾಗಿ ಮೃತಪಟ್ಟಿರುವ ದಾರುಣ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಂದ್ರದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮುತ್ಸಂದ್ರ ಗ್ರಾಮದ ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಾ ಅಲ್ಲಿಯ ಲೇಬರ್ ಶೆಡ್‌ನಲ್ಲಿ ವಾಸಿಸುತ್ತಿದ್ದ ಅಸ್ಸಾಂ ಮೂಲದ ಜಯಂತ್ ಸಿಂಧೆ (25), ನೀರೇಂದ್ರನಾಥ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಮೃತಪಟ್ಟವರು.
ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ನಾಲ್ವರು ಹಲವು ತಿಂಗಳುಗಳಿಂದ ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು,ಅವರಿಗೆ ವೇರ್ ಹೌಸ್ ಬಳಿಯೇ ನಿರ್ಮಿಸಿದ್ದ ಶೆಡ್ ನಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಪ್ರತಿದಿನದಂತೆ ಶುಕ್ರವಾರ ಕೆಲಸ ಮುಗಿಸಿಕೊಂಡು ಬಂದ ಅಡುಗೆ ಮಾಡಿದ ಅವರು ಊಟ ಮಾಡಿದ ಬಳಿಕ ನಾಲ್ವರೂ ರಾತ್ರಿ ಚಳಿಗೆ ಶೆಡ್‌ನ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಅಡುಗೆ ಮಾಡಿ ಊಟ ಮಾಡಿ ಮಲಗಿದ್ದು ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಬೆಳಗಿನ ಜಾವ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಬೆಳಿಗ್ಗೆ ಇತರ ಶೆಡ್ ಗಳ ಕಾರ್ಮಿಕರು ಕೆಲಸಕ್ಕೆ ಕರೆಯಲು ಬಂದು ನೋಡಿದಾಗ ಮಲಗಿದ್ದ ಸ್ಥಿತಿಯಲ್ಲಿಯೇ ನಾಲ್ವರು ಮೃತಪಟ್ಟಿರುವುದನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣವೇ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ.


