ಶಿವಮೊಗ್ಗ : ಕೆಲಸದ ವಿಚಾರವಾಗಿ ಗಲಾಟೆ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಅಗರದಹಳ್ಳಿಯ ನಿವಾಸಿ ಸುರೇಶ್ ಎ.ವಿ (54) ಎಂಬಾತನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2022ರ ಫೆಬ್ರವರಿ 25ರಂದು ರಾತ್ರಿ ಆರೋಪಿ ಸುರೇಶ್ ತನ್ನ ಮನೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಈ ವೇಳೆ ಶಬ್ದದಿಂದ ಮಕ್ಕಳಿಗೆ ಓದಲು ತೊಂದರೆಯಾಗುತ್ತಿದೆ ಎಂದು ದೂರುದಾರರು ಮನವಿ ಮಾಡಿದ್ದರು. ಆದರೆ, ಇದರಿಂದ ಕೆರಳಿದ ಸುರೇಶ್, ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ, ಅಗರದಹಳ್ಳಿ ಕಾಲುದಾರಿಯಲ್ಲಿ ಅವರನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿದ್ದ. ಈ ಹಿನ್ನೆಲೆ ಆರೋಪಿತನ ಮೇಲೆ ಪ್ರಕರಣ ದಾಖಲಾಗಿತ್ತು.
ಅಂದಿನ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯ್ಕ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿತನ ಮೇಲಿನ ದೂರು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್.ಸಿ-ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸುರೇಶ್‌ಗೆ 2 ವರ್ಷ ಕಠಿಣ ಕಾರಾವಾಸ ಹಾಗೂ 50,500 ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 25,000 ರೂಪಾಯಿಯನ್ನು ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.


