ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತಂದೆ, ತಾಯಿ ಮತ್ತು ಸಹೋದರಿಯನ್ನು ವ್ಯಕ್ತಿ ಕೊಲೆ ಮಾಡಿ ನಾಪತ್ತೆ ಎಂದು ದೂರು ದಾಖಲಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸತ್ಯ ತಿಳಿದ ಕೊಟ್ಟೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಕ್ಷಯ ಕುಮಾರ ಕೊಲೆ ಮಾಡಿದ ವ್ಯಕ್ತಿ. ಕೊಲೆಗೈದು ಬೆಂಗಳೂರಿಗೆ ತೆರಳಿದ ಆರೋಪಿ ತಂದೆ, ತಾಯಿ ಮತ್ತು ಸಹೋದರಿ ನಾಪತ್ತೆ ಆಗಿದ್ದಾರೆ ಎಂದು ಬೆಂಗಳೂರಿನ ತಿಲಕ್ನಗರ ಠಾಣೆಗೆ ದೂರು ನೀಡಿದ್ದ. ಆರೋಪಿಯು ಕುಟುಂಬದವರನ್ನು ಹತ್ಯೆ ಮಾಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ನಾಪತ್ತೆ ದೂರು ದಾಖಲಿಸಲು ಬಂದಿದ್ದ ಆರೋಪಿಯ ಬಗ್ಗೆ ಅನುಮಾನಗೊಂಡ ತಿಲಕ್ನಗರ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಅಸ್ಪಷ್ಟ ಹೇಳಿಕೆ ನೀಡಿದ್ದಾನೆ. ಕೊಟ್ಟೂರಿನ ಮನೆಯಲ್ಲಿ ಮೂವರನ್ನು ಕೊಂದು ಹೂತಿದ್ದಾಗಿ ಒಮ್ಮೆ ಹೇಳಿ ದರೆ, ಮತ್ತೊಮ್ಮೆ ಸಂಡೂರಲ್ಲಿ ಶವ ಎಸೆದಿರುವುದಾಗಿ ಹೇಳಿದ್ದಾನೆ. ಕೊಟ್ಟೂರು ಠಾಣೆಗೆ ತಿಲಕ್ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ ಬಳಿಕ ಆರೋಪಿ ಹೇಳಿರುವ ಸ್ಥಳದಲ್ಲಿ ಶವಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.


