ಸಾಗರದಲ್ಲಿ ಮಾರಿಕಾಂಬ ದೇವಿ ಜಾತ್ರೆ ಹಿನ್ನೆಲೆ ಭಕ್ತರ ಅನುಕೂಲಕ್ಕಾಗಿ ಯಶವಂತಪುರ – ಶಿವಮೊಗ್ಗ ನಡುವೆ ಸಂಚರಿಸುವ ರಾತ್ರಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.
ಮಾರಿಕಾಂಬ ಜಾತ್ರೆಯು ಫೆಬ್ರವರಿ 3ರಿಂದ 11ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿರುವ ಭಕ್ತರಿಗಾಗಿ ತಾಳಗುಪ್ಪದವರೆಗೆ ವಿಶೇಷ ರೈಲನ್ನು ಬಿಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ವಿಶೇಷ ರೈಲು ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಯಶವಂತಪುರ ಮತ್ತು ಶಿವಮೊಗ್ಗ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು, ಜಾತ್ರೆ ಅವಧಿಯಲ್ಲಿ ಫೆಬ್ರವರಿ 3 ರಿಂದ 11ರವರೆಗೆ ಪ್ರತಿದಿನ ತಾಳಗುಪ್ಪದವರೆಗೆ ಸಂಚರಿಸುವಂತೆ ವ್ಯವಸ್ಥೆ ಮಾಡಲು ಮನವಿ ಮಾಡಲಾಗಿದೆ. ಇದಕ್ಕೆ ಸಚಿವರು ಒಪ್ಪಿಕೊಂಡಿದ್ದಾರೆ. ಶೀಘ್ರವೆ ರೈಲ್ವೆ ಇಲಾಖೆ ಆದೇಶ ಹೊರಡಿಸಲಿದೆ. ಮಲೆನಾಡಿಗರು ಈ ಅವಕಾಶ ಬಳಸಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


