ಬೆಂಗಳೂರು: ಅಕ್ರಮ ಆನ್ ಲೈನ್ ಬೆಟ್ಟಿಂಗ್ ಹಗರಣದ ಆರೋಪಿ ವೀರೇಂದ್ರ ಪಪ್ಪಿಗೆ ಸೇರಿದ 177.3 ಕೋಟಿ ರೂ. ಮೌಲ್ಯದ ಅಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ವೀರೇಂದ್ರ ಪಪ್ಪಿಗೆ ಸೇರಿದ ಕೃಷಿ ಜಮೀನು, ನಿವೇಶನ, ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ 177.3 ಕೋಟಿ ರೂ. ಎಂದು ಜಾರಿ ನಿರ್ದೇಶನಾಲಯ ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಸಂಪಾದಿಸಿದ ಆಸ್ತಿಯನ್ನು ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ವಿವಿಧ ರಾಜ್ಯಗಳಲ್ಲಿ ವೀರೇಂದ್ರ ಪಪ್ಪಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ತನಿಖೆ ವೇಳೆ ಅಕ್ರಮ ಸಂಪಾದನೆಯಿಂದ ಗಳಿಸಿದ ಆಸ್ತಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಅಕ್ರಮ ಆನ್ ಲೈನ್ ಬೆಟ್ಟಿಂಗ್ ಹಗರಣದಲ್ಲಿ ಇಡಿ 60ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿತ್ತು.
ತನಿಖೆ ವೇಳೆ ವೀರೇಂದ್ರ ಪಪ್ಪಿ ಮಾಸ್ಟರ್ ಮೈಂಡ್ ಆಗಿದ್ದು, ಸಹಚರರ ಕೈವಾಡ ದೃಢಪಟ್ಟಿದೆ ಎಂದು ಇಡಿ ಹೇಳಿದೆ.


