Thursday, January 29, 2026
Menu

ಫೆ.13 ಹಾವೇರಿಯಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ: ಸಚಿವ ಕೃಷ್ಣ ಬೈರೇಗೌಡ

krishna bhiregowda

ಬೆಂಗಳೂರು: ಫೆಬ್ರವರಿ.13 ರಂದು ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದ್ದು, ಮುಂದಿನ ವಾರದೊಳಗೆ ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಸಿದ್ಧಗೊಳಿಸಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ವಿಕಾಸಸೌಧದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ ಅವರು, “ರಾಜ್ಯದ ಉದ್ದಗಲಕ್ಕೂ ಹಾಡಿ, ಹಟ್ಟಿ, ತಾಂಡಗಳು ಕಂದಾಯ ಗ್ರಾಮಗಳಲ್ಲದ ಕಾರಣ ಅಲ್ಲಿನ ನಿವಾಸಿಗಳು ಸರಕಾರಿ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಇಂತಹ ಜನವಸತಿ ಪ್ರದೇಶ ಗಳನ್ನು ಕಂದಾಯ ಗ್ರಾಮಗಳ ಸ್ಥಾನಮಾನ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಲಕ್ಷಾಂತರ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ನೀಡುವ ಸಲುವಾಗಿ 2017ರಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿತ್ತು,” ಎಂದು ಸ್ಮರಿಸಿದರು.

“ಈ ತಿದ್ದುಪಡಿಯ ನಂತರ 2023 ಮೇ ವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರ ಸ್ವೀಕರಿಸಿ ಮೇ 2023 ರಿಂದ 2025ರ ವರೆಗೆ 1.11 ಲಕ್ಷ ಫಲಾನುಭವಿಗಳಿಗೆ ಕಳೆದ ವರ್ಷ ಹೊಸಪೇಟೆಯಲ್ಲಿ ಕಾರ್ಯಕ್ರಮ ನಡೆಸಿ ಡಿಜಿಟಲ್ ಹಕ್ಕುಪತ್ರ ನೀಡಿದೆ. ಅಧಿಕಾರಿಗಳ ಶ್ರಮ ಇಲ್ಲದೆ ಈ ಕೆಲಸ ಅಸಾಧ್ಯವಾಗಿರುತ್ತಿತ್ತು,” ಎಂದು ಅಧಿಕಾರಿಗಳ ಕೊಡುಗೆಯನ್ನು ಪ್ರಶಂಸಿಸಿದರು.

“‌2026 ರಲ್ಲಿ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕು ಎಂಬ ಗುರಿ ನಿಗದಿಪಡಿಸಿ ನಾನಾ ಕಾರಣಗಳಿಂದ ಬಿಟ್ಟುಹೋಗಿರುವ ಉಳಿದ ಜನವಸತಿ ಪ್ರದೇಶಗಳನ್ನೂ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಈ ಪೈಕಿ 86,000 ಜನ ಫಲಾನುಭವಿಗಳ ಹಕ್ಕುಪತ್ರಗಳನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಫೆ.13 ರಂದು ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದ್ದು 1 ಲಕ್ಷ ಜನರಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು, ಉಳಿದ ಫಲಾನುಭವಿಗಳ ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಮುಂದಿನ ವಾರದೊಳಗೆ ಸಿದ್ದಪಡಿಸಿ,” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

”ಈ ಮೂಲಕ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನೂ ಕಂದಾಯ ಗ್ರಾಮಗಳಿಗೆ ತಲುಪಿಸುವ ಗುರಿಯೊಂದಿಗೆ ಕಳೆದ ಎರಡೂವರೆ ವರ್ಷದಲ್ಲಿ ಒಟ್ಟಾರೆ 2.11ಲಕ್ಷ ಕಂದಾಯ ಗ್ರಾಮಗಳ ಕುಟುಂಬಗಳಿಗೆ ಹಕ್ಕುಪತ್ರ ನೀಡಿದಂತಾಗುತ್ತದೆ. ಇದಲ್ಲದೆ, ಮೂಲ ದಾಖಲೆ ಕಳೆದುಹೋಗುವ ಅಥವಾ ದಾಖಲೆಗಳನ್ನು ತಿದ್ದುವುದನ್ನು ತಡೆಯಲು ಫಲಾನುಭವಿಗಳಿಗೆ ಡಿಜಿಟಲ್‌ ಹಕ್ಕು ಪತ್ರಗಳನ್ನು ನೀಡಬೇಕು. ಜತೆಗೆ, ಫಲಾನುಭವಿಗಳ ಹೆಸರಿಗೆ ಸರಕಾರವೇ ಕ್ರಯಪತ್ರದ ಮೂಲಕ ನೋಂದಣಿ ಮಾಡಿಸಿ, ಸ್ಥಳೀಯ ಸಂಸ್ಥೆಯಿಂದ ಖಾತೆ ಕೊಡಿಸಬೇಕು. ಈ ಮೂಲಕ ಫಲಾನುಭವಿಗಳು ಮತ್ತೆ ಸರಕಾರಿ ಕಚೇರಿಗಳಿಗೆ ಅಲೆಯುವುದೂ ತಪ್ಪಬೇಕು,” ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್‌ ಕಟಾರಿಯಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್‌, ಸರ್ವೇ ಇಲಾಖೆ ಆಯುಕ್ತರಾದ ವೆಂಕಟರಾಜು ಸೇರಿದಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *