Thursday, January 29, 2026
Menu

ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ

hdk

ನವದೆಹಲಿ: ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕೆನಡಾದ ನೈಸರ್ಗಿಕ ಸಂಪನ್ಮೂಲಗಳ ಖಾತೆ ಸಚಿವ ಟಿಮ್ ಹಾಡ್ಗಸನ್‌ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ನವದೆಹಲಿಯ ಉದ್ಯೋಗ ಭವನದಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ಸಚಿವರು, ಎರಡೂ ದೇಶಗಳ ನಡುವಿನ ಕೈಗಾರಿಕೆ ಕ್ಷೇತ್ರದಲ್ಲಿ ಹೊಂದಬಹುದಾದ ಸಗಕಾರಗಳ ಬಗ್ಗೆ ಪರಸ್ಪರ ಚರ್ಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯತಂತ್ರದ ಭಾಗವಾಗಿ ಹಲವಾರು ಕ್ಷೇತ್ರಗಳಲ್ಲಿ ಸುಸ್ಥಿರ ಬೆಳವಣಿಗೆ, ತಾಂತ್ರಿಕ ನಾಯಕತ್ವ ಮತ್ತು ಸ್ವಾವಲಂಬನೆಗೆ ಒತ್ತು ನೀಡುವ ಬಗ್ಗೆ ಕುಮಾರಸ್ವಾಮಿ ಅವರು ಕೆನಡಾ ಸಚಿವರೊಂದಿಗೆ ಮಾತುಕತೆ ನಡೆಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತ ಕನಸು ಸಾಕಾರ ಆಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. 2070ರ ವೇಳೆಗೆ ಆಟೋಬೊಮೈಲ್‌ ಕ್ಷೇತ್ರದಲ್ಲಿ ಇಂಗಾಲದ ನಿವ್ವಳ ಹೊಸಸೂಸುವಿಕೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಡುತ್ತಿದೆ. ಆಟೋಮೋಟಿವ್, ಭಾರೀ ಎಲೆಕ್ಟ್ರಿಕಲ್ ಮತ್ತು ಬಂಡವಾಳ ಸರಕುಗಳ ವಲಯಗಳು ಈ ಸುಸ್ಥಿರ ಬೆಳವಣಿಗೆಯ ಪಥವನ್ನು ಬೆಂಬಲಿಸುವ ಪ್ರಮುಖ ಸ್ತಂಭಗಳಾಗಿವೆ” ಎಂದು ಸಚಿವ ಕುಮಾರಸ್ವಾಮಿ ಹೇಳಿದರು.

“ಜಗತ್ತಿನ ಪ್ರಮುಖ ಆಟೋಮೊಬೈಲ್ ತಯಾರಕ ದೇಶಗಳಲ್ಲಿ ಮುಂಚೂಣಿಯಲ್ಲಿರುವ ಭಾರತವು ಫೇಮ್‌ -೨ (FAME-II) ಯೋಜನೆಯ ಮೂಲಕ ಇವಿ ವಾಹನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದೆ. ಈ ಯೋಜನೆ ಮೂಲಕ 16 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ರಸ್ತೆಗೆ ಇಳಿಯುವಂತೆ ಮಾಡಿತು ಮತ್ತು ದೇಶಾದ್ಯಂತ 10,900ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸಹಕಾರಿ ಆಯಿತು” ಎಂದು ಕುಮಾರಸ್ವಾಮಿ ಅವರು ಕೆನಡಾ ಸಚಿವರಿಗೆ ಮಾಹಿತಿ ನೀಡಿದರು.

ಆ ನಂತರ ಪಿಎಂ ಇ-ಡ್ರೈವ್‌ (PM E-DRIVE) ಯೋಜನೆ ಮತ್ತು ಪಿಎಂ ಇ-ಬಸ್‌ ಸೇವಾ ಉಪಕ್ರಮಗಳ ಮೂಲಕ ಇವಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್‌ಗಳು, ಟ್ರಕ್ಕುಗಳು, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಬೆಂಬಲಿಸುವ ಪರಿವರ್ತನಾತ್ಮಕ ಯೋಜನೆಯಾಗಿ ಅನುಷ್ಠಾನಕ್ಕೆ ಬಂದಿತು ಎಂದು ಹೇಳಿದ ಸಚಿವರು; ಈ ಉಪಕ್ರಮಗಳ ಮೂಲಕ ನಾವು ನಮ್ಮ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ ಮತ್ತು ನಮ್ಮ ಉತ್ಪನ್ನಗಳು ಜಾಗತಿಕ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸುತ್ತಿವೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದರು.

ಈ ದ್ವಿಪಕ್ಷೀಯ ಚರ್ಚೆಯ ಪ್ರಮುಖ ಗಮನವು ದೃಢವಾದ ಮತ್ತು ಸುರಕ್ಷಿತ ಬ್ಯಾಟರಿ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಅಗತ್ಯವಾದ ನಿರ್ಣಾಯಕ ಖನಿಜಗಳ ಉತ್ಪಾದನೆ, ಬಳಕೆ ಬಗ್ಗೆ ಕೇಂದ್ರೀಕೃತವಾಗಿತ್ತು.

ಹಾಗೆಯೇ; ಭಾರತದ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ದೀರ್ಘಕಾಲೀನ ಇಂಧನ ಭದ್ರತೆಯನ್ನು ಬಲಪಡಿಸಲು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ) ಕೆನಡಾದಲ್ಲಿ ಕಲ್ಲಿದ್ದಲು ನಿಕ್ಷೇಪಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ ಎಂದು ಇದೇ ವೇಳೆ ಕೆನಡಾ ಸಚಿವರೊಂದಿಗೆ ಚರ್ಚಿಸುತ್ತಾ ಸಚಿವರು ಹೇಳಿದರು.

ಸಚಿವ ಟಿಮ್ ಹಾಡ್ಗಸನ್‌ ನೇತೃತ್ವದ ಕೆನಡಾದ ನಿಯೋಗವು ನವೀನ ತಂತ್ರಜ್ಞಾನಗಳು ಮತ್ತು ಕೈಗಾರಿಕಾ ನಾವೀನ್ಯತೆಯಲ್ಲಿ ಭಾರತದ ತ್ವರಿತ ಪ್ರಗತಿ ಬಗ್ಗೆ ಕುತೂಹಲದ, ಆಶಾದಾಯಕ ಪ್ರತಿಕ್ರಿಯೆ ತೋರಿತು. ಬ್ಯಾಟರಿ ತಂತ್ರಜ್ಞಾನಗಳು ಮತ್ತು ಇವಿ ಸಾರಿಗೆ ಪರಿಹಾರಗಳಲ್ಲಿ ಭಾರತವನ್ನು ಜಾಗತಿಕ ನಾಯಕ ಎಂದು ಈ ಸಂದರ್ಭದಲ್ಲಿ ಕೆನಡಾ ಸಚಿವರು ಬಣ್ಣಿಸಿದರು ಹಾಗೂ ಭಾರತೀಯ ಪಾಲುದಾರರೊಂದಿಗೆ ಸುಧಾರಿತ ಬ್ಯಾಟರಿ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಕೆನಡಾದ ಇಚ್ಛೆಯನ್ನು ವ್ಯಕ್ತಪಡಿಸಿದರು.

ಇವಿ ಚಲನಶೀಲತೆ ಮತ್ತು ಉತ್ಪಾದನಾ ವಲಯಗಳಲ್ಲಿ ಭಾರತೀಯ ಖಾಸಗಿ ವಲಯದ ಉದ್ಯಮಿಗಳು ನಡೆಸುತ್ತಿರುವ ಗಮನಾರ್ಹ ಕೆಲಸವನ್ನು ಅವರು ಶ್ಲಾಘಿಸಿದರು ಮತ್ತು ಭಾರತೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶಕ್ಕಾಗಿ ಕೆನಡಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಅಲ್ಲದೆ; ಇಂಗಾಲ ಹೊರಸೂವಿಕೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಿರ್ಣಾಯಕವಾಗಿರುವ ಲಿಥಿಯಂ, ಕೋಬಾಲ್ಟ್, ಗ್ರ್ಯಾಫೈಟ್ ಮತ್ತು ಅಪರೂಪದ ಭೂಮಿಯ ಅಂಶಗಳಿಗೆ ಭಾರತದ ಅವಶ್ಯಕತೆಗಳನ್ನು ಬೆಂಬಲಿಸಲು ಕೆನಡಾದ ಓಲವನ್ನು ಅವರು ಪುನರುಚ್ಚರಿಸಿದರು.

ಬ್ಯಾಟರಿ ಕೋಶ ಮತ್ತು ಘಟಕ ಉತ್ಪಾದನೆಯಲ್ಲಿ ಜಂಟಿ ಸಮನ್ವಯ ಚೌಕಟ್ಟುಗಳು ಮತ್ತು ಸಹಯೋಗದ ಅವಕಾಶಗಳು, ಮುಂದಿನ ಪೀಳಿಗೆಯ ಬ್ಯಾಟರಿಗಳ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ, ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳು, ಪರೀಕ್ಷೆ ಮತ್ತು ಪ್ರಮಾಣೀಕರಣ ಮೂಲಸೌಕರ್ಯ, ಕ್ಲೀನ್ ಮೊಬಿಲಿಟಿ ಪರಿಹಾರಗಳು ಮತ್ತು ಸುಸ್ಥಿರ ಉತ್ಪಾದನಾ ಪ್ರಕ್ರಿಯೆಗಳ ಕುರಿತು ಸಭೆಯು ವಿವರವಾದ ಚರ್ಚೆಗಳು ಈ ಸಂದರ್ಭದಲ್ಲಿ ನಡೆಯಿತು.

ಈ ಚರ್ಚೆಯ ಸಂದರ್ಭದಲ್ಲಿ ಬೃಹತ್‌ ಕೈಗಾರಿಕೆ ಸಚಿವಾಲಯ ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು, ಅವರಲ್ಲಿ ಬೃಹತ್‌ ಕೈಗಾರಿಕೆ ಸಚಿವಲಾಯದ ಕಾರ್ಯದರ್ಶಿ ಕಮ್ರನ್ ರಿಜ್ವಿ, ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ, ಜಂಟಿ ಕಾರ್ಯದರ್ಶಿ ವಿಜಯ್ ಮಿತ್ತಲ್, ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ್ ತ್ರಿಪಾಠಿ, ಎನ್‌ಎಂಡಿಸಿ ಸಿಎಂಡಿ ಅಮಿತವ್ ಮುಖರ್ಜಿ, ಬಿಎಚ್‌ಇಎಲ್ ಸಿಎಂಡಿ ಕೆ.ಎಸ್. ಮೂರ್ತಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.‌

Related Posts

Leave a Reply

Your email address will not be published. Required fields are marked *