Thursday, January 29, 2026
Menu

38 ಸಾವಿರ ಕೋಟಿ ರೂ. ಬಾಕಿ, ಮಾ.5ಕ್ಕೆ ಪ್ರತಿಭಟನೆ, ಸಭೆ ಕರೆಯದಿದ್ದರೆ ದಾಖಲೆ ಬಿಡುಗಡೆ: ಗುತ್ತಿಗೆದಾರರ ಸಂಘ ಸಿಎಂಗೆ ಎಚ್ಚರಿಕೆ

ಗುತ್ತಿಗೆದಾರರಿಗೆ ರಾಜ್ಯ ಸರ್ಕಾರವು 38 ಸಾವಿರ ಕೋಟಿ ರೂ. ಬಾಕಿ ಇದೆ. ಸರ್ಕಾರ ಸಮಸ್ಯೆ ಬಗೆಹರಿಸಿಲ್ಲವಾದ್ದರಿಂದ ಮಾ.5 ರಂದು ಬೃಹತ್ ಪ್ರತಿಭಟನೆ ಮಾಡುತ್ತಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ ಇದೆ. ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಿದರೂ ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಕೂಡಲೇ ಸಿಎಂ ಸಭೆ ಕರೆಯಲಿಲ್ಲ ಅಂದ್ರೆ ದಾಖಲೆ ಬಿಡುಗಡೆ ಮಾಡುತ್ತೇವೆಂದು ಎಚ್ಚರಿಸಿದರು.

ಚಿಕ್ಕಬಳ್ಳಾಪುರದ ಗುತ್ತಿಗೆದಾರ ಮುನೇಗೌಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 25 ಲಕ್ಷ ಬಾಕಿ ಕೊಟ್ಟಿಲ್ಲ ಅಂತ ಬ್ಯಾಂಕ್‌ನವರು ಮನೆ ಬಳಿ ಬಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿದರು. ಗುತ್ತಿಗೆದಾರರಿಗೆ ಹಣ ಬಾಕಿ ಕುರಿತು ಈಗಾಗಲೇ ಮುಖ್ಯಮಂತ್ರಿಗೆ 100 ಪುಟಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಟೆಂಡರ್ ಅನುಮೋದನೆ ಹಾಗೂ ಹಣ ಬಿಡುಗಡೆ ಮಾಡುವಲ್ಲಿ ಹಿಂದಿನ ಸರ್ಕಾರಕ್ಕಿಂತ ಪರಿಸ್ಥತಿ ಕೆಟ್ಟದಾಗಿದೆ. ವಸತಿ ಇಲಾಖೆಯಲ್ಲಿ ಒಂದು ವರ್ಗವೇ ಗುತ್ತಿಗೆ ಕೊಡಿಸುವ ಕೆಲಸ ಮಾಡುತ್ತಿದೆ. ಸಿಎಂ ಕೂಡಲೇ ಗುತ್ತಿಗೆದಾರರ ಸಭೆ ಕರೆಯುವಂತೆ ಮಂಜುನಾಥ್ ಆಗ್ರಹಿಸಿದರು.

ಗುತ್ತಿಗೆದಾರರ ಸಮಸ್ಯೆ ಈಡೇರಿಸದಿದ್ದರೆ ಫೆಬ್ರವರಿಯಿಂದ ಕೆಲಸ ಸ್ಥಗಿತಗೊಳಿಸುತ್ತೇವೆ, ಮಾರ್ಚ್ 5 ರಂದು ಬೃಹತ್ ಪ್ರತಿಭಟನೆ ಮಾಡ್ತಾ ಇದ್ದೇವೆ. ಒಂದು ವಾರ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಏಜೆಂಟ್‌ಗಳು ಕಚೇರಿ ಮಾಡಿಕೊಂಡಿದ್ದಾರೆ. ಏಜೆಂಟ್‌ಗಳು ತಮ್ಮ ಕಚೇರಿಗೆ ಇಲಾಖೆಯಮುಖ್ಯ ಇಂಜಿನಿಯರ್‌ರನ್ನು ಕರೆಸಿಕೊಳ್ತಾರೆ ಎಂದು ಗಂಭೀರ ಆರೋಪ ಮಾಡಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆಗೆ ಪತ್ರ ಬರೆಯಲು ಮುಂದಾಗಿದ್ದೇವೆ. ಮಾರ್ಚ್ ಒಳಗಡೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಕಳೆದ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಪರ್ಸೆಂಟೇಜ್ ಜಾಸ್ತಿ ಆಗಿದೆ. ಎಲ್ಲಾ ಇಲಾಖೆಯಲ್ಲೂ ಹಣ ಬಿಡುಗಡೆಗೆ ಜಾಸ್ತಿ ತಗೊಳ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ನಗರಾಭಿವೃದ್ಧಿ ಇಲಾಖೆ ಅಷ್ಟೇ ಅಲ್ಲ, ವಸತಿ ಇಲಾಖೆಯಲ್ಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಆಫೀಸ್‌ ಮಾಡಿಕೊಂಡು ಮಧ್ಯವರ್ತಿಗಳು ಕೆಲಸ ಮಾಡ್ತಾರೆ. ಹೇಳಿದ ಹಾಗೆ ಕೇಳದೆ ಇದ್ರೆ ಟೆಂಡರ್ ಕ್ಯಾನ್ಸಲ್ ಮಾಡ್ತೇವೆ ಎನ್ನುತ್ತಾರೆ.

ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಏಳು ಸಚಿವರಿಂದ ಗುತ್ತಿಗೆದಾರರಿಗೆ ಸಮಸ್ಯೆ, ಅನ್ಯಾಯ ಆಗ್ತಿದೆ, ಎಲ್ಲರ ಗಮನಕ್ಕೆ ತಂದಿದ್ದೇವೆ ಸರಿಪಡಿಸಿಲ್ಲ.ಸಚಿವರೇ ಟೆಂಡರ್ ಕ್ಯಾನ್ಸಲ್ ಮಾಡಿಸ್ತಾ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಲೋಕೋಪಯೋಗಿ ಇಲಾಖೆ: 8,370.76 ಕೋಟಿ, ಜನಸಂಪನ್ಮೂಲ ಇಲಾಖೆ: 13,000 ಕೋಟಿ, ಆರ್.ಡಿ.ಪಿ.ಆರ್.: 3800 ಕೋಟಿ, ಸಣ್ಣ ನೀರಾವರಿ ಇಲಾಖೆ: 3000 ಕೋಟಿ, ನಗರಾಭಿವೃದ್ಧಿ ಇಲಾಖೆ: 2000 ಕೋಟಿ, ವಸತಿ ಮತ್ತು ವಕ್ಫ್ ಇಲಾಖೆ: 2600 ಕೋಟಿ, ಕಾರ್ಮಿಕ ಇಲಾಖೆ: 2000 ಕೋಟಿ, ಜಿಬಿಎ: 2600 ಕೋಟಿ, ಒಟ್ಟು ಬಾಕಿ 37,370.76 ಕೋಟಿ ರೂ. ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಇದೆ ಎಂದು ವಿವರ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *