ಯುವಕನೊಬ್ಬ ಹಲವು ಯುವತಿಯರೊಂದಿಗೆ ಸೆಕ್ಸ್ ಮಾಡಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯೆನಪೋಯ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದಾನೆ. ಆರೋಪಿಯು ಯುವತಿಯರ ಜತೆಗಿನ ಸೆಕ್ಸ್ ವೀಡಿಯೊ ರೆಕಾರ್ಡ್ ಮಾಡುತ್ತಿದ್ದ. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಯುವಕರ ಮೇಲೆ ಹಲ್ಲೆ ನಡೆದಿರುವ ವೀಡಿಯೊಗಳೂ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಈ ಹಲ್ಲೆಗಳು ಸವದ್ ಕಡೆಯವರಿಂದ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ, ಆದರೆ ಹಲ್ಲೆಗೆ ಒಳಗಾದವರು ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸವದ್ ಸ್ನೇಹಿತರೇ ವೀಡಿಯೊಗಳನ್ನು ವೈರಲ್ ಮಾಡಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ.


