ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಾಗಿ ಹೊತ್ತಿದ ಬೆಂಕಿಗೆ ಮನೆ ಮಾಲೀಕ ಮಲ್ಲಿಕಾರ್ಜುನ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಶಿಕಾರಿಪುರ ಪಟ್ಟಣದ ಕುಂಬಾರಗುಂಡಿ ಬಡಾವಣೆಯಲ್ಲಿ ನಡೆದಿದೆ.
ಮನೆಗೆ ಬಂದ ಅಡುಗೆ ಅನಿಲ ಸಿಲಿಂಡರ್ ಅನ್ನು ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿ ಸ್ಟವ್‌ಗೆ ಜೋಡಿಸುವಾಗ ಅನಿಲ ಸೋರಿಕೆಯಾಗಿ ಬೆಂಕಿ ಹರಡಿಕೊಂಡಿದೆ. ಬೆಂಕಿಯಿಂದ ಗಾಯಗೊಂಡ ಮನೆ ಮಾಲೀಕ ಮಲ್ಲಿಕಾರ್ಜುನ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಕಿಯ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿ ಮನೆಗೆ ಬಹುತೇಕ ಹಾನಿಯಾಗಿದೆ. ಅಡುಗೆ ಮನೆಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಿಂದ ಹೊರಗೆ ಓಡಿ ಬಂದ ಮಲ್ಲಿಕಾರ್ಜುನ್ ಅಕ್ಕ ಹಾಗೂ ಪತ್ನಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಬೆಂಕಿ ಹರಡಿದ ಸಂದರ್ಭದಲ್ಲಿ ಮನೆ ಸಮೀಪವಿದ್ದ ಎದುರು ಮನೆ ಮಹಿಳೆ ಕಮಲಮ್ಮ ಅವರ ಕಾಲಿಗೆ ಬೆಂಕಿ ತಗುಲಿದ ಪರಿಣಾಮ ಸಣ್ಣ ಪುಟ್ಟ ಗಾಯಗಳಾಗಿವೆ.
ಹೊಸ ಹಂಪ್‌ಗಳಿಂದ ಆಟೋ ಪಲ್ಟಿ
ಶಿವಮೊಗ್ಗ ನಗರದ ವಿವಿಧೆಡೆ ವಾಹನಗಳ ವೇಗ ನಿಯಂತ್ರಣ ಮತ್ತು ಅಪಘಾತ ತಪ್ಪಿಸಲು ಹಾಕಿದ್ದ ಹಂಪ್‌ಗಳಿಂದಾಗಿಯೇ ಕಳೆದ ರಾತ್ರಿ ಅಪಘಾತಗಳಾಗಿವೆ. ಹೊಸ ಹಂಪ್‌ಗಳನ್ನು ನಿರ್ಮಿಸಿ ಮುಂಜಾಗ್ರತೆ ವಹಿಸದೆ ಇರುವುದೇ ಅಪಘಾಕ್ಕೆ ಕಾರಣವಾಗಿದೆ. ಶರಾವತಿ ನಗರದ ಚಾನಲ್ ಪಕ್ಕದ ರಸ್ತೆಯಲ್ಲಿಯು ಹೊಸತಾಗಿ ಹಂಪ್ ಮಾಹಿತಿ ಇಲ್ಲದೆ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗೂಡ್ಸ್ ಆಟೋ ಹಂಪ್ ಹಾರಿ ಪಲ್ಟಿಯಾಗಿದೆ. ಆಟೋದ ಗ್ಲಾಸ್ ಒಡೆದಿದ್ದು, ಮುಂಭಾಗ ಜಖಂ ಆಗಿದೆ. ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಹಂಪ್ ಹಾಕಿದವರು ಸೂಕ್ತ ಮುನ್ನಚ್ಚರಿಕೆ ವಹಿಸದೆ ಇರುವುದೆ ಅಪಘಾತಕ್ಕೆ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.
ಈವರೆಗೆ ಹಂಪ್‌ಗಳೇ ಇರದ ರಸ್ತೆಯಲ್ಲಿ ದಿಢೀರ್ ಹಂಪ್‌ಗಳು ಪ್ರತ್ಯಕ್ಷವಾಗಿರುವುದು, ಸೂಕ್ತ ಮಾರ್ಕ್‌ಗಳು ಇಲ್ಲದಿರುವುದರಿಂದ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಉಷಾ ನರ್ಸಿಂಗ್ ಸರ್ಕಲ್‌ನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಹಲವರು ಬಿದ್ದು ಗಾಯಗೊಂಡಿದ್ದರು. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಹಂಪ್‌ಗಳಿಗೆ ಬಣ್ಣ ಹಚ್ಚಲಾಗಿತ್ತು. ಕಳೆದ ರಾತ್ರಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿಯು ಹೊಸ ಹಂಪ್‌ಗಳನ್ನು ಹಾಕಲಾಗಿದೆ. ಆ ರಸ್ತೆಯಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.


