ಬೆಂಗಳೂರು ಪೂರ್ವ ವಿಭಾಗದಲ್ಲಿ ಟೆಕ್ಕಿಯೊಬ್ಬರು ಸಂಚಾರ ನಿಯಮಗಳ ಉಲ್ಲಂಘನೆ ದಂಡ ಪಾವತಿಸಲು ಲಿಂಕ್ ಕ್ಲಿಕ್ ಮಾಡಿ 2.32 ಲಕ್ಷ ರೂ. ಕಳೆದುಕೊಂಡಿದ್ದಾರೆ. ಟ್ರಾಫಿಕ್ ಚಲನ್ ಪಾವತಿ ಹೆಸರಿನಲ್ಲಿ ಬಂದ ನಕಲಿ ವೆಬ್‌ಸೈಟ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿವರ ನಮೂದಿಸಿ 500 ರೂ. ಟ್ರಾಫಿಕ್ ಚಲನ್ ಪಾವತಿಸಲು ಹೋಗಿ 2.32 ಲಕ್ಷ ರೂ. ಸೈಬರ್ ವಂಚಕರ ಪಾಲಾಗಿದೆ. ಸಂತ್ರಸ್ತ ವ್ಯಕ್ತಿಯ ದೂರಿನ ಅನ್ವಯ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಟೆಕ್ಕಿಗೆ ಜನವರಿ 26 ರಂದು ‘ನಿಮ್ಮ 500 ರೂ. ಟ್ರಾಫಿಕ್ ಚಲನ್ ಬಾಕಿ ಇದೆ’ ಎಂದು ಮೆಸೇಜ್ ಬಂದಿತ್ತು, ಹಣ ಪಾವತಿಗೆ ಲಿಂಕ್ ಕೂಡ ಇತ್ತು. ಲಿಂಕ್ ಕ್ಲಿಕ್ ಮಾಡಿದಾಗ 500 ರೂ. ದಂಡ ಪಾವತಿಸಲು ಪಾವತಿ ವಿವರಗಳನ್ನು ಕೇಳುವ ವೆಬ್‌ಸೈಟ್ ಓಪನ್ ಆಗಿದೆ. ಅವರು ಕ್ರೆಡಿಟ್ ಕಾರ್ಡ್ ಮಾಹಿತಿ ನಮೂದಿಸಿದ್ದಾರೆ. ತಕ್ಷಣವೇ ಖಾತೆಯಿಂದ 2,32,272 ರೂ. ಡೆಬಿಟ್ ಆಗಿದೆ. ಮೋಸದ ಅರಿವಾಗಿ ಅವರು ಪೊಲೀಸ್‌ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಚಲನ್‌ಗಳ ಕ್ಲಿಯರೆನ್ಸ್ ಕೋರಿ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಮತ್ತೆ ಹೇಳಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್‌ಗಳು, ದಂಡ ಅಥವಾ ಬಹುಮಾನ ಎಂಬ ಸಂದೇಶಗಳನ್ನು ಲಿಂಕ್ ಕ್ಲಿಕ್ ಮಾಡಬೇಡಿ, ಬ್ಯಾಂಕ್, ಕಾರ್ಡ್ ವಿವರಗಳನ್ನು ನಮೂದಿಸಬೇಡಿ. ನೇರವಾಗಿ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.


