Thursday, January 29, 2026
Menu

ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್, ಶರಾವತಿ ಸಂತ್ರಸ್ತರಿಗೆ ಪರಿಹಾರ: ತೀರ್ಮಾನ ಅಂತಿಮ ಘಟ್ಟದಲ್ಲಿ ಎಂದ ಸಚಿವ ಖಂಡ್ರೆ

ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂಪತ್ತು ರಕ್ಷಣೆ ಮತ್ತು ಜನರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್ ಮತ್ತು ಶರಾವತಿ ಸಂತ್ರಸ್ತರಿಗೆ ಪರಿಹಾರ ಕುರಿತಾದ ತೀರ್ಮಾನಗಳು ಅಂತಿಮ ಘಟ್ಟ ತಲುಪಿವೆ ಎಂದು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ.  

ತ್ಯಾವರೆಕೊಪ್ಪದ ಸಿಂಹಧಾಮದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೆಟ್ಟಿಹಳ್ಳಿ ವನ್ಯಜೀವಿ ಧಾಮ ಡಿ-ನೋಟಿಫಿಕೇಷನ್ ಪ್ರಸ್ತಾವನೆಯು ಸುಮಾರು 2016 ರಿಂದ ಬಾಕಿ ಇದ್ದು ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಹಿಂದೆ 1974 ರಲ್ಲಿ ನೋಟಿಫಿಕೇಷನ್ ಮಾಡಿದ ಸಂದರ್ಭದಲ್ಲಿ 395 ಚ.ಕೀ ಪ್ರದೇಶ ಸೇರ್ಪಡೆ ಮಾಡಿದ್ದರು. ಆದರೆ ಅದರಲ್ಲಿ ಬಸ್ ಸ್ಟಾಂಡ್, ಎಫ್‌ಸಿಐ ಗೋಡಾನ್, ಎಪಿಎಂಸಿ, ಸರ್ಕಾರಿ ಕಚೇರಿಗಳು, ಜನವಸತಿ ಪ್ರದೇಶ ಸೇರ್ಪಡೆಗೊಂಡಿದ್ದು ಇದೆಲ್ಲವನ್ನೂ ಪರಿಶೀಲನೆ ಮಾಡಿ, ಅಧಿಕಾರಿಗಳು ಸಮೀಕ್ಷೆಗಳನ್ನು ಮಾಡಿದ್ದಾರೆ. ಈ ಕುರಿತು ಹಲವಾರು ಸಭೆಗಳನ್ನು ಮಾಡಲಾಗಿದೆ. ಅರಣ್ಯ ಸಂಪತ್ತು ಸಂರಕ್ಷಣೆ ಮಾಡಬೇಕು. ಜೀವನ ಮತ್ತು ಜೀವನೋಪಾಯ ಎರಡೂ ಬೇಕಾಗಿದ್ದು ಆಡಳಿತಾತ್ಮಕವಾಗಿ, ಭಾವನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಲು ಖುದ್ದಾಗಿ ಪರಿಶೀಲಿಸಲು ಬಂದಿದ್ದೇನೆ. ನಂತರ ಸಭೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶರಾವತಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರೋಪಾಯ ಅಂತಿಮ ಘಟ್ಟ ತಲುಪಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿದ್ದು ನ್ಯಾಯಾಲಯವು, ಕೇಂದ್ರ ಸರ್ಕಾರ ಮತ್ತು ಅರಣ್ಯ ಇಲಾಖೆ ಸೇರಿ ತೀರ್ಮಾನ ಮಾಡಲು ಸೂಚಿಸಿದೆ.  ಕಂದಾಯ ಇಲಾಖೆಯು ಅರ್ಹ ಫಲಾನುಭವಿಗಳನ್ನು ಗುರಿತಿಸುತ್ತಿದ್ದು, ಅರಣ್ಯ ಇಲಾಖೆ ನಿರಂತರವಾಗಿ ಕಂದಾಯ ಇಲಾಖೆಯ ಸಂಪರ್ಕದಲ್ಲಿದೆ. ಕಂದಾಯ ಇಲಾಖೆ ಅಂತಿಮಗೊಳಿಸಿದ ಪಟ್ಟಿ ಬಂದ ತಕ್ಷಣ ಸುಮಾರು 60 ವರ್ಷಗಳ ನಂತರ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಶಾಶ್ವತವಾಗಿ ಪರಿಹಾರ ನೀಡುತ್ತಿದೆ ಎಂದರು.

ವನ್ಯಜೀವಿ ಸಂರಕ್ಷಣೆ ಆಗಬೇಕು, ಅರಣ್ಯ ಸಂಪತ್ತು ಉಳಿಯಬೇಕು ಹಾಗೂ ಅಭಿವೃದ್ದಿಯೂ ಆಗಬೇಕು ಈ ನಿಟ್ಟಿನಲ್ಲಿ ಸರ್ಕಾರ ತೀರ್ಮಾನಗಳನ್ನು ತೆಗೆದುಕೊಳ್ಳತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಸರ್ಕಾರ ಹಲವಾರು ಕ್ರಮ ಕೈ ಗೊಂಡಿದೆ. ಆನೆ ಕಾರ್ಯಪೆಡೆ, ಚಿರತೆ ಕಾರ್ಯಪಡೆ, ಹೆಚ್ಚುವರಿ ಸಿಬ್ಬಂದಿ ನೇಮಕ, ಸಲಕರಣೆಗಳು, ಕ್ಯಾಂಪ್‌ಗಳು, ರೈಲ್ವೇ ಬ್ಯಾರಿಕೇಡ್, ಸೋಲಾರ್ ಫೆನ್ಸಿಂಗ್ ರಚನೆ, ಕಮಾಂಡ್ ಸೆಂಟರ್ ಗಳು, ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ಗಳು ಜೊತೆಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು ಒಂದೇ ಒಂದು ಜೀವ ಕಳೆದುಕೊಳ್ಳದ ರೀತಿ ಮಾನವ ಪ್ರಾಣ ಮತ್ತು ವನ್ಯಜೀವಿಗಳು ಉಳಿಯಬೇಕೆಂಬ ದೃಷ್ಟಿಯಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ‍್ಯಾನಾಯ್ಕ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Related Posts

Leave a Reply

Your email address will not be published. Required fields are marked *