ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ 87 ಕೋಟಿ ರೂ. ಮೌಲ್ಯದ ಸಾಫ್ಟ್‌ವೇರ್ ಸೋರ್ಸ್ ಕೋಡ್ ಕದ್ದಿರುವ ಆರೋಪ ಕೇಳಿ ಬಂದಿದ್ದು, ಕಂಪೆನಿಯಿಂದ ವಜಾಗೊಳಿಸಲಾಗಿದೆ.
ಕಂಪನಿಯ ಆಂತರಿಕ ತನಿಖೆಯ ನಂತರ ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಡೇಟಾ ಕಳವಿನಿಂದ ಕಂಪನಿಗೆ ದೊಡ್ಡ ಆರ್ಥಿಕ ನಷ್ಟದ ಜೊತೆಗೆ ಬೌದ್ಧಿಕ ಸ್ವತ್ತಿಗೆ ಗಂಭೀರ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಆಶುತೋಷ್ ನಿಗಮ್ ಪ್ರಕರಣದ ಆರೋಪಿ. 2020 ಫೆಬ್ರವರಿ 1ರಿಂದ ಅಮಾಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾದಲ್ಲಿ ಆತ ಸೀನಿಯರ್ ಮ್ಯಾನೇಜರ್ ರಿಸರ್ಚ್ ಸೈಂಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಎಫ್‌ಐಆರ್ ಪ್ರಕಾರ, 2025ರ ಅಕ್ಟೋಬರ್ 11ರಂದು ಕಂಪನಿಯ ಅನುಮತಿ ಇಲ್ಲದೆ ವೈಯಕ್ತಿಕ ಇಮೇಲ್ ಖಾತೆಯ ಮೂಲಕ ಕಂಪನಿಗೆ ಸೇರಿದ ಸಾಫ್ಟ್‌ವೇರ್ ಸೋರ್ಸ್ ಕೋಡ್ ಹಾಗೂ ಇತರ ಗೌಪ್ಯ ಮಾಹಿತಿಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ಕಂಪನಿಯ ಆಂತರಿಕ ತನಿಖೆ ವೇಳೆ ಸಂಗ್ರಹಿಸಿದ ದಾಖಲೆಗಳು ಮತ್ತು ವರದಿಗಳ ಆಧಾರದಡಿ ಆರೋಪಿಯ ವಿಚಾರಣೆ ನಡೆಸಿದಾಗ, ನಿಗಮ್ ಸೋರ್ಸ್ ಕೋಡ್ ಕಳವು ಒಪ್ಪಿಕೊಂಡಿದ್ದಾರೆ. ಸಂಬಂಧಿಸಿದ ವೀಡಿಯೊ ದಾಖಲೆ ಕಂಪನಿಯ ಬಳಿ ಇದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ನಂತರ ಡಿಸೆಂಬರ್ 3ರಂದು ಉದ್ಯೋಗಿಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಜನವರಿ 23ರಂದು ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


