Wednesday, January 28, 2026
Menu

ಬೆಂಗಳೂರಿನಲ್ಲಿ ಡ್ರಗ್ಸ್‌ ದಂಧೆ: ಉದ್ಯಮಿ ಪುತ್ರಿ, ಬಿಬಿಎಂ ವಿದ್ಯಾರ್ಥಿನಿ ಅರೆಸ್ಟ್‌

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿಯ ಪುತ್ರಿಯಾಗಿರುವ ಬಿಬಿಎಂ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ನಿವಾಸಿ ಮೇಘನಾ ಹಾಗೂಸ್ನೇಹಿತ ಆದಿತ್ಯ ಬಂಧಿತ ಆರೋಪಿಗಳು. ಬಂಧಿತರಿಂದ 4 ಕೆಜಿ ಗಾಂಜಾ, 37 ಗ್ರಾಂ ಎಡಿಎಂಎ, 35 ಗ್ರಾಂ ಹ್ಯಾಶಿಶ್ ಹಾಗೂ ಬೈಕ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನುವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ತರುಣ್‌ ಹಾಗೂ ದಿಲೀಪ್‌ ಸೇರಿ ಮೂವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಡ್ರಗ್ಸ್ ಮಾರಾಟದ ಬಗ್ಗೆ ಸಿಸಿಬಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ದಳಕ್ಕೆ ಸುಳಿವು ಸಿಕ್ಕಿದೆ.ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್‌ಗಳಾದ ಸುಬ್ರಹ್ಮಣ್ಯಪುರ ಠಾಣೆ ಎಂ.ಎಸ್‌.ರಾಜು ಹಾಗೂ ಸಿಸಿಬಿಯ ಜೆ.ಸಿ.ರಾಜು ನೇತೃತ್ವದ ತಂಡವು ದಾಳಿ ನಡೆಸಿದಾಗ ಪೆಡ್ಲರ್‌ಗಳು ಸೆರೆಯಾಗಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಸ್ಥಿತಿವಂತ ಕುಟುಂಬದ ವಿದ್ಯಾರ್ಥಿನಿ ಮೇಘನಾ ಮೋಜು ಮಸ್ತಿಗಾಗಿ ಈ ದಂಧೆಯಲ್ಲಿ ಭಾಗಿಯಾಗಿದ್ದಾಳೆ. ಆಕೆಯ ತಂದೆ ಉದ್ಯಮಿ, ಬನಶಂಕರಿಯಲ್ಲಿ ಮೇಘನಾ ಕುಟುಂಬ ನೆಲೆಸಿದೆ. ಮೊದಲು ತನ್ನ ಸ್ನೇಹಿತರ ಮೂಲಕ ಮಾದಕ ವಸ್ತು ವ್ಯಸನಿಯಾದ ಆಕೆ ನಂತರ ಪೆಡ್ಲರ್ ಆಗಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದಾಳೆ. ಸ್ನೇಹಿತರಾದ ತರುಣ್ ಹಾಗೂ ದಿಲೀಪ್ ಸೂಚನೆಯಂತೆ ಆಕೆ ಕೆಲಸ ಮಾಡುತ್ತಿದ್ದಳು. ತನ್ನ ಪ್ರಿಯಕರನ ಗೆಳೆಯ ಆದಿತ್ಯ ಜತೆಗೂಡಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು. ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಈ ತಂಡ ದಂಧೆ ನಡೆಸುತ್ತಿತ್ತು. ಗ್ರಾಹಕರು ಕಳುಹಿಸುವ ಲೋಕೇಷನ್‌ಗೆ ತೆರಳಿ ಆದಿತ್ಯ ಡ್ರಗ್ಸ್ ತಲುಪಿಸಿದರೆ, ಆನ್‌ಲೈನ್‌ ಮೂಲಕ ಮೇಘನಾ ಹಣ ಸ್ವೀಕರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ನಗರಕ್ಕೆ ಡ್ರಗ್ಸ್ ಮಾರಾಟಕ್ಕೆ ಬಂದಿದ್ದ ಕೇರಳದ ವ್ಯಕ್ತಿಯನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ರೂ.. ಮೌಲ್ಯದ 31 ಗ್ರಾಂ ಎಂಡಿಎಂಎ ಜಪ್ತಿಯಾಗಿದೆ. ಎರಡು ದಿನಗಳ ಹಿಂದೆ ಎಚ್‌ಎಂಟಿ ಕೈ ಗಡಿಯಾರ ಕಂಪನಿಯ ರೈಲ್ವೆ ಮೇಲ್ಸೇತುವೆ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *