ಭಾರತ-ಯುರೋಪ್ ಒಕ್ಕೂಟದ ನಡುವೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದವು ಭಾರತಕ್ಕೆ ವರವಾಗಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲಾಗುವ ಒಪ್ಪಂದವು ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ವ್ಯಾಪಾರ ರೇಖೆಯನ್ನು ಮತ್ತಷ್ಟು ಸರಳವಾಗಿಸುತ್ತದೆ ಹಾಗೂ ಯುರೋಪ್ ಜತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ಒಪ್ಪಂದದ ಭಾಗವಾಗಿ ಉತ್ಪಾದನೆ, ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕಕ್ಕೆ ವರದಾನವಾಗಲಿದೆ, ಹೊಸ ಅವಕಾಶಗಳ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಹೇಳಿದ್ದು, ಇದು ವ್ಯಾಪಾರ ವಹಿವಾಟಿನಲ್ಲಿ ಹೊಸ ಶಕೆಗೆ ನಾಂದಿ ಹಾಡಲಿದೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಗಳಾದ ಮೇಲೆ ಭಾರತೀಯ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಯಲ್ಲಿ ಪರಿವರ್ತನಾತ್ಮಕ ಅಭಿವೃದ್ಧಿ ಕಂಡು ಬಂದಿದೆ. ಈಗ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದಿಂದ ಈ ಅಭಿವೃದ್ಧಿ ಮತ್ತೊಂದು ಉನ್ನತ ಸ್ತರಕ್ಕೆ ಏರಲಿದೆ ಎನ್ನುವ ವಿಶ್ವಾಸವನ್ನು ಕೇಂದ್ರ ಸಚಿವರು ವ್ಯಕ್ತಪಡಿಸಿದ್ದಾರೆ.
ಐಟಿ ಬಿಟಿ, ಸೇವಾ ವಲಯ, ಎಂಜಿನಿಯರಿಂಗ್ , ಎಲೆಕ್ಟ್ರಾನಿಕ್ಸ್ ಮತ್ತು ಔಷಧ ಸೇರಿದಂತೆ ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಕೈಗಾರಿಕೆಗಳಿಗೆ ಈ ಒಪ್ಪಂದವು ಶಕ್ತಿ ತುಂಬಿದೆ ನೀಡುತ್ತದೆ ಎಂದು ಹೇಳಿದ್ದಾರೆ.
ಭಾರತವೂ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಆಗಿದೆ. ಯುರೋಪಿಯನ್ ಒಕ್ಕೂಟವು ಎರಡನೇ ಬೃಹತ್ ಆರ್ಥಿಕತೆ ಆಗಿದ್ದು, ಈ ಎರಡೂ ಆರ್ಥಿಕತೆಗಳ ನಡುವೆ ಆಗಿರುವ ಒಪ್ಪಂದಿಂದ ಜಾಗತಿಕ ಜಿಡಿಪಿಯಲ್ಲಿ ಶೇಕಡಾ 25ರಷ್ಟು ಪಾಲು ಹೊಂದಿವೆ. ಹಾಗೆಯೇ ಜವಳಿ, ಚಿನ್ನಾಭರಣ, ವಜ್ರ ಇತ್ಯಾದಿ ಉತ್ಪನ್ನಗಳ ವಲಯದಲ್ಲಿ ₹6.41 ಲಕ್ಷ ಕೋಟಿ ವಹಿವಾಟು ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದೊಂದು ಐತಿಹಾಸಿಕ ಒಪ್ಪಂದವಾಗಿದೆ. ಮುಂದಿನ ದಿನಗಳಲ್ಲಿ ಯುರೋಪ್ ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಅಲ್ಲಿ ಉದ್ಯೋಗ ಅರಸಿ ಹೋಗುವ ಯುವ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.


