ಬೆಂಗಳೂರು: ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಗಮನ ಸೆಳೆವ ಸೂಚನೆ ವೇಳೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರ ನೀಡಿದರು.
ಬಿಜೆಪಿ ಶಾಸಕ ಮುನಿರಾಜು ಅವರು ಅರ್ಕಾವತಿ ಬಡಾವಣೆ ನಿರ್ಮಾಣವಾಗಿ 20 ವರ್ಷವಾಗಿದ್ದರೂ ನಿವೇಶನ ಸ್ವಾಧೀನ, ರೈತರಿಗೆ ಪರಿಹಾರ ನೀಡದಿರುವ ಬಗ್ಗೆ ಕೇಳಿದಾಗ, “ಅರ್ಕಾವತಿ ಬಡಾವಣೆ ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು, ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ ಎಂದರು.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಮುಂದೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸಲು ಕೇಶವ ನಾರಾಯಣ ಸಮಿತಿ ನೇಮಿಸಿದೆ. ಈ ಸಮಿತಿ ಪರಿಶೀಲನೆ ಮಾಡುತ್ತಿದೆ. ಭೂಸಂತ್ರಸ್ತ ರೈತರಿಗೆ ಪರಿಹಾರವಾಗಿ ಭೂಮಿ ನೀಡಬೇಕು ಎಂಬುದಕ್ಕೆ ನಾನು ಬದ್ಧವಾಗಿದ್ದೇನೆ. ಈ ವಿಚಾರವಾಗಿ ಸಧ್ಯದಲ್ಲೇ ಸಭೆ ಕರೆಯಲಿದ್ದು, ಸಮಿತಿಯವರನ್ನು ಕರೆದು ಆದಷ್ಟು ಬೇಗ ತೀರ್ಮಾನ ಮಾಡುವಂತೆ ಮನವಿ ಮಾಡಲಾಗುವುದು. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಲಾಗುವುದು” ಎಂದು ಭರವಸೆ ನೀಡಿದರು.
“ಕೇವಲ ಈ ಪ್ರಕರಣ ಮಾತ್ರವಲ್ಲ, ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲೂ ನ್ಯಾಯಾಲಯ ಹೊಸ ಅರ್ಜಿ ತೆಗೆದುಕೊಳ್ಳಲು ಅವಕಾಶ ನೀಡಿಲ್ಲ. ಹೀಗಾಗಿ ಇಲ್ಲಿ ಮೊದಲು ಭೂಸಂತ್ರಸ್ತರಿಗೆ ಭೂಮಿ ನೀಡಲಾಗುತ್ತಿದ್ದು, ಅರ್ಕಾವತಿ ಬಡಾವಣೆ ಭೂಸಂತ್ರಸ್ತರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲಾಗುವುದು” ಎಂದು ತಿಳಿಸಿದರು.
ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್ ಸೌಲಭ್ಯ
ಕಾಂಗ್ರೆಸ್ ಶಾಸಕರಾದ ಸುಬ್ಬಾರೆಡ್ಡಿ ಅವರು ರಾಜ್ಯದ ಟೋಲ್ ಗಳಲ್ಲಿ ಜನರಿಗೆ ಕಿರಿಕಿರಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು, “ಮೈಸೂರು ಬೆಂಗಳೂರು ರಸ್ತೆಯ ಟೋಲ್ ಬಳಿ ಈ ರೀತಿ ಕಿರಿಕಿರಿ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಹುನಗುಂದದಲ್ಲೂ ನೋಟೀಸ್ ನೀಡಿ 10 ಲಕ್ಷ ದಂಡ ವಿಧಿಸಲಾಗಿದೆ. ಇದಕ್ಕೆ ನಾವು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇನ್ನು ಸ್ಪೀಕರ್ ಕಡೆಯಿಂದ ಶಾಸಕರು, ಎಂಎಲ್ ಸಿಗಳು ಹಾಗೂ ಸಂಸದರಿಗೆ ಪಾಸ್ ಹಾಗೂ ಫಾಸ್ಟ್ಯಾಗ್ ಅನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಸರ್ಕಾರದಿಂದ ಏನು ಸಹಕಾರ ನೀಡಬೇಕೋ ನಾವು ನೀಡುತ್ತೇವೆ. ನಾವು ಶಾಸಕರನ್ನು ರಕ್ಷಣೆ ಮಾಡಬೇಕು” ಎಂದು ತಿಳಿಸಿದರು.


