ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಕಾಂಗ್ರೆಸ್ ಮುಖಂಡ ರಾಜು ಬೆದರಿಕೆ ಹಾಕಿ ನಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿ ಸಂತ್ರಸ್ತ ದಂಪತಿ ಅಮಿತಾಬ್ ಹಾಗೂ ಸುಷ್ಮಾ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಲಿಖಿತ ದೂರು ನೀಡಲು ಮುಂದಾಗಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೋರಿ ದೂರು ಸಲ್ಲಿಸಲು ಸಂತ್ರಸ್ತ ದಂಪತಿ ಸಿದ್ಧತೆ ನಡೆಸಿದ್ದು, ಆರೋಪಿ ರಾಜು ನಂಜನಗೂಡು ತಾಲೂಕು ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡ. ಕೆಲವು ದಿನಗಳ ಹಿಂದೆ ಹೆಬ್ಯಾ ಗ್ರಾಮದಲ್ಲಿ ಅಮಿತಾಬ್ ಹಾಗೂ ಸುಷ್ಮಾ ಮೇಲೆ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಅಮಿತಾಬ್ ಜಾಗವನ್ನು ತಮ್ಮ ಹೆಸರಿಗೆ ಬರೆಯುವಂತೆ ರಾಜು ಒತ್ತಡ ಹಾಕುತ್ತಿದ್ದ ಎಂಬ ಆರೋಪವಿದೆ. ಅಮಿತಾಬ್ ಒಪ್ಪದ ಕಾರಣ ರಾಜು ಹಾಗೂ ಬೆಂಬಲಿಗರು ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕಲ್ಲುಗಳಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ, ನನಗೆ ಸಿದ್ದರಾಮಯ್ಯ ಗೊತ್ತು, ಯತೀಂದ್ರ ಗೊತ್ತು’ ಎಂದು ಬೆದರಿಕೆ ಹಾಕಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಮಿತಾಬ್ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಎಫ್ಐಆರ್ ಆಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳಿಂದ ನಿರಂತರ ಬೆದರಿಕೆಗಳು ಮುಂದುವರಿದಿದೆ ಎಂದು ದಂಪತಿ ಆರೋಪಿಸಿದ್ದಾರೆ. ಸ್ಥಳೀಯವಾಗಿ ನ್ಯಾಯ ಸಿಗದ ಕಾರಣ ದಂಪತಿ ದೆಹಲಿಗೆ ಹೋಗಿ ನರೇಂದ್ರ ಮೋದಿ ಹಾಗೂ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜು ಗೌಡನನ್ನು ಪಕ್ಷ ಉಚ್ಚಾಟಿಸಿದ್ದು, ಸೋಮವಾರ ಕೇರಳಕ್ಕೆ ಪರಾರಿಯಾಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆಂಬುದು ಸಾರ್ವಜನಿಕರ ನಿರೀಕ್ಷೆ.


