Menu

ಬೆಂಗಳೂರಿನಲ್ಲಿ ಲೈಟರ್‌ ಜಗಳ: ಕಾರು ಚಲಾಯಿಸಿ ಗೆಳೆಯನ ಕೊಲೆ

ಲೈಟರ್‌ ವಿಚಾರಕ್ಕೆ ಗೆಳೆಯರಿಬ್ಬರ ನಡುವೆ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ವೀರಸಂದ್ರದ ಬಳಿ ನಡೆದಿದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ರೋಷನ್‌ ಹೆಗ್ಡೆ ಸ್ನೇಹಿತ ಪ್ರಶಾಂತ್‌ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದು ಅಪಘಾತವಲ್ಲ, ಕೊಲೆ ಎನ್ನುವುದು ರೋಷನ್‌ನ ಡ್ಯಾಶ್‌ ಕ್ಯಾಮ್‌ನಲ್ಲಿ ಸೆರೆಯಾಗಿರುವ ದೃಶ್ಯಗಳಿಂದ ದೃಢಪಟ್ಟಿದೆ. ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.  ಎಲೆಕ್ಟ್ರಾನಿಕ್‌ ಸಿಟಿ ಬಳಿಯ ವೀರಸಂದ್ರದ ಪ್ರಶಾಂತ್‌ ತಾಯಿಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಉಡುಪಿ ಬ್ರಹ್ಮಾವರದ ರೋಷನ್‌ ಹೆಗ್ಡೆ, ದೊಮ್ಮಲೂರಿನ ಐಟಿ ಕಂಪನಿಯ ಉದ್ಯೋಗಿ ಎಂದು ಪೊಲೀಸರು ಹೇಳಿದ್ದಾರೆ.

ಹೆಬ್ಬಗೋಡಿಯ ಕಮ್ಮಸಂದ್ರದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪ್ರಶಾಂತ್‌ ಹಾಗೂ ಸ್ನೇಹಿತರ ತಂಡ ಸೋತಿತ್ತು. ಬಳಿಕ ಪ್ರಶಾಂತ್‌ ಮತ್ತು ಆರೋಪಿ ರೋಷನ್‌ ನಡುವೆ ಜಗಳವಾಗಿತ್ತು. ಮನೆಗೆ ಬಂದಿದ್ದ ಪ್ರಶಾಂತ್‌, ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸೋತ ವಿಚಾರವನ್ನು ತಾಯಿಯ ಬಳಿ ಬೇಸರದಿಂದ ಹೇಳಿಕೊಂಡಿದ್ದ ಎನ್ನಲಾಗಿದೆ.

ಪಂದ್ಯದ ಮರುದಿನ ರೋಷನ್‌, ಪ್ರಶಾಂತ್‌ನನ್ನು ಸಂಜೆ ಪಾರ್ಟಿಗೆ ಕರೆಸಿಕೊಂಡಿದ್ದ. ಕಮ್ಮಸಂದ್ರದ ಆಟದ ಮೈದಾನದಲ್ಲಿ ರೋಷನ್‌, ಪ್ರಶಾಂತ್‌ ಮತ್ತು ಸ್ನೇಹಿತರು ಮದ್ಯ ಸೇವಿಸಿದ್ದರು. ಪ್ರಶಾಂತ್‌ ಸಿಗರೇಟ್‌ ಹಚ್ಚಲು ರೋಷನ್‌ ಬಳಿ ಲೈಟರ್‌ ಕೇಳಿದ್ದರು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ರೋಷನ್‌, ಪ್ರಶಾಂತ್‌ಗೆ ಹೊಡೆದಿದ್ದಾನೆ. ಸ್ನೇಹಿತರು ಇಬ್ಬರನ್ನೂ ಸಮಾಧಾನಪಡಿಸಿ ಜಗಳ ಬಿಡಿಸಿದ್ದರು.

ಅದಾದ ಬಳಿಕ ರೋಷನ್‌ ಕಾರು ಚಾಲನೆ ಮಾಡಿಕೊಂಡು ಹೊರಟಿದ್ದ. ಪ್ರಶಾಂತ್‌ ಏಕಾಏಕಿ ಕಾರಿನ ಬಳಿ ಹೋಗಿ ಡೋರ್‌ ಹಿಡಿದುಕೊಂಡು ರೋಷನ್‌ಗೆ ಅವಾಚ್ಯವಾಗಿ ನಿಂದಿಸಿದ್ದ. ಕಾರು ಮುಂದೆ ಸಾಗಿದರೂ ಪ್ರಶಾಂತ್‌ ಡೋರ್‌ ಕೈಬಿಡದೆ ವಾಹನದ ಫುಟ್‌ರೆಸ್ಟ್‌ ಮೇಲೆ ನಿಂತಿದ್ದ. ಇದನ್ನು ಲೆಕ್ಕಿಸದೆ ರೋಷನ್‌ ಆಟದ ಮೈದಾನದಿಂದ 400 ಮೀಟರ್‌ ದೂರದವರೆಗೆ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಮರಕ್ಕೆ ಹಾಗೂ ಕಾಂಪೌಂಡ್‌ಗೆ ಗುದ್ದಿಸಿದ್ದಾನೆ. ಪ್ರಶಾಂತ್‌ ತಲೆ ಮತ್ತು ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ಸಂಬಂಧ ಪ್ರಶಾಂತ್‌ ತಾಯಿ ಅನು ದೂರು ಕೊಟ್ಟಿದ್ದು, ರೋಷನ್‌ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿಕೊಲೆ ಪ್ರಕರಣ ದಾಖಲಾಗಿದೆ. ರೋಷನ್‌ನ ಕಾರಿನ ಡ್ಯಾಶ್‌ ಬೋರ್ಡ್‌ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.

ಪ್ರಶಾಂತ್‌ ಕಾರು ನಿಲ್ಲಿಸುವಂತೆ ಹೇಳಿದರೂ ರೋಷನ್‌ ವಾಹನ ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿದ್ದ. ಅಪಘಾತದ ವೇಳೆ ಪ್ರಶಾಂತ್‌ ಕಾರಿನ ಎಡ ಭಾಗದ ಕಿಟಕಿ ಹಿಡಿದು ನೇತಾಡುತ್ತಿದ್ದರು. ರಸ್ತೆ ಬದಿಯ ಮರ, ಕಾಂಪೌಂಡ್‌ ಮತ್ತು ಕಾರಿನ ನಡುವೆ ಸಿಲುಕಿ ಗಂಭೀರ ಪೆಟ್ಟಾಗಿತ್ತು. ಆರೋಪಿ ರೋಷನ್‌ ನಾಲಿಗೆ ತುಂಡಾಗಿದ್ದು,. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *