Menu

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅನುದಾನ ಹಿಂಪಡೆದ ವದಂತಿ: ಬಿಜೆಪಿಯವರು ದಾಖಲೆ ನೀಡಲಿ ಎಂದ ಕಾಂಗ್ರೆಸ್‌

-ಬಸವರಾಜ ಕರುಗಲ್

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿ ಆಮೆ ವೇಗದಲ್ಲಿದೆ ಎಂಬುದರ ಜೊತೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ ತನ್ನ ಪಾಲಿನ 10 ಕೋಟಿ ರೂಪಾಯಿ ಅನುದಾನ ಹಿಂಪಡೆದಿದೆ ಎಂಬ ವದಂತಿ ಜಿಲ್ಲೆಯಲ್ಲಿ ಕೋಲಾಹಲ ಹಬ್ಬಿಸಿದೆ.

ಅನುದಾನ ವಾಪಸ್‌ ಪಡೆದಿರುವ ಬಗ್ಗೆ ಬಿಜೆಪಿಯವರು ದಾಖಲೆ ಕೊಡಲಿ. ಸುಮ್ಮನೆ ಏನೇನೋ ಹೇಳುವುದಲ್ಲ. ಬಿಜೆಪಿಗೆ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೆನೂ ಗೊತ್ತಿಲ್ಲ. ರೈತರು ಆತಂಕ ಗೊಳ್ಳಬೇಕಿಲ್ಲ. ರಾಜ್ಯ ಸರಕಾರ ರೈತಪರವಾಗಿದ್ದು, ಕಾಮಗಾರಿ ನಿಗದಿತ ವೇಳೆಗೆ ಮುಗಿಯಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ  ಶಿವರಾಜ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. 

ಬಿಜೆಪಿ ನಾಯಕರು ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದಕ್ಕೆ ಅನುದಾನ ಹಿಂಪಡೆದದ್ದು ಕನ್ನಡಿಯಾಗಿದೆ. ಈ ಭಾಗದ ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರೆ, ಕಾಂಗ್ರೆಸ್‌ ನಾಯಕರು ಬಿಜೆಪಿಗೆ ಮಾಡಲು ಬೇರೆ ಕೆಲಸ ಇಲ್ಲ. ಕಾಂಗ್ರೆಸ್‌ ವಿರುದ್ಧ ವೃಥಾ ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದು ಹರಿಹಾಯ್ದಿದ್ದಾರೆ.

2025ರ ಡಿಸೆಂಬರ್‌ನಲ್ಲಿ ಜಲಾಶಯದ ಕ್ರಸ್ಟ್‌ಗೇಟ್‌ ಬದಲಿಸುವ ಹಾಗೂ ನೂತನ ಕ್ರಸ್ಟ್‌ ಗೇಟ್‌ ಅಳವಡಿಸುವ ಕಾಮಗಾರಿಗೆ ರಾಜ್ಯ ಸರಕಾರ ಆಂಧ್ರ, ತೆಲಂಗಾಣ ಸರಕಾರದ ಸಹಭಾಗಿತ್ವದಡಿ ಚಾಲನೆ ನೀಡಿದೆ. ಒಟ್ಟು 52 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಆಂಧ್ರ ತನ್ನ ಪಾಲಿನ ಶೇಕಡಾ 71 ರಷ್ಟರ ಅನುದಾನದಲ್ಲಿ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈಚೆಗೆ ರಾಜ್ಯ ಸರಕಾರ ತನ್ನ ಪಾಲಿನ ಶೇಕಡಾ 29ರಷ್ಟರ ಅನುದಾನದಲ್ಲಿ 10 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು.

ಕ್ರಸ್ಟ್‌ಗೇಟ್‌ ಬದಲಿಸುವ ಹಾಗೂ ಅಳವಡಿಸುವ ಕಾಮಗಾರಿಯನ್ನು ಮೇ ಅಂತ್ಯ ಇಲ್ಲವೇ ಜೂನ್‌ ವೇಳೆಗೆ ಪೂರ್ಣಗೊಳಿಸುವ ಭರವಸೆಯನ್ನು ಇಂಜನಿಯರ್‌ ಹಾಗೂ ಬೋರ್ಡ್‌ನ ಅಧಿಕಾರಿಗಳು ನೀಡಿದ ಪ್ರಕಾರ ಸರಕಾರ ತಿಳಿಸಿತ್ತು. ಕಾಮಗಾರಿ ಆರಂಭಗೊಂಡು ಎರಡು ತಿಂಗಳು ಮುಗಿಯುತ್ತಾ ಬಂದರೂ ಆಮೆಗತಿಯ ವೇಗ ಕಂಡು ಜನಪ್ರತಿನಿಧಿಗಳು ಜಲಾಶಯಕ್ಕೆ ಭೇಟಿ ನೀಡಿದಾಗ “ಹಣ ಇಲ್ಲದೇ ಕೆಲಸ ಹೇಗೆ ಮಾಡುವುದು ಸರ್‌” ಎಂಬ ಹೇಳಿಕೆ ಇಷ್ಟೆಲ್ಲ ಕೆಸರೆರಚಾಟಕ್ಕೆ ಕಾರಣವಾಗಿದೆ.

ಅನುದಾನ ಕುರಿತು ಬುಕ್‌ ಅಡ್ಜಸ್ಟ್‌ಮೆಂಟ್‌ ಮಾಡಲಾಗಿದೆ ಎಂಬ ಕುರಿತು ಊಹಾಪೋಹಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ. ಇದಕ್ಕೆಲ್ಲ ತೆರೆ ಬೀಳಬೇಕೆಂದರೆ ಅನುದಾನ ವಾಪಸ್‌ ಹೋಗಿರುವ ದಾಖಲೆ ಬಿಡುಗಡೆಯಾಗಬೇಕು. ಇಲ್ಲವೇ ಬಿಡುಗಡೆಯಾದ ಅನುದಾನವನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡಿರುವ ಬಗ್ಗೆ ಖಚಿತ ಅಂಕಿ-ಅಂಶ ಬಹಿರಂಗಗೊಳ್ಳಬೇಕು. ಜಲಾಶಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೇ ಅನುದಾನ ವಾಪಸ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಕಾಮಗಾರಿ ವೇಗ ಪಡೆಯುತ್ತಿಲ್ಲ. ಹಣದ ಲಭ್ಯತೆಯನುಸಾರ ಕೆಲಸ ಮಾಡುವ ಬಗ್ಗೆ ತಿಳಿಸಿರುವು ದನ್ನು ಗಮನಿಸಿದರೆ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೂಡಲೇ ಈ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು. ಬಿಜೆಪಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಕಾಂಗ್ರೆಸ್‌ ಟೀಕಿಸುವುದೇ ನಮ್ಮ ಕೆಲಸವಲ್ಲ. ಒಟ್ಟಿನಲ್ಲಿ ಒಂದು ಬೆಳೆ ಕಳೆದುಕೊಂಡಿರುವ ಅನ್ನದಾತ ಸಂಕಷ್ಟ ಅನುಭವಿಸಬಾರದು ಎಂಬುದು ಬಿಜೆಪಿ ಕಾಳಜಿ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿದರೆ ಸಂಬಂಧ ಪಟ್ಟವರನ್ನು ಅಭಿನಂದಿಸುವುದರಲ್ಲಿ ತಪ್ಪೇನಿದೆ ಎಂದು ಗಂಗಾವತಿಯ ಮಾಜಿ ಶಾಸಕ – ಪರಣ್ಣ ಮುನವಳ್ಳಿ ಹೇಳಿದ್ದಾರೆ.  

Related Posts

Leave a Reply

Your email address will not be published. Required fields are marked *