ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿತರಾಗಿದ್ದ ತಾಯಿ ಮತ್ತು ಮಗನಿಗೆ ಶಿವಮೊಗ್ಗ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಶವಂತ ಕುಮಾರ್ ಆರೋಪಿಗಳ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 1 ನೇ ಆರೋಪಿ ಪೃಥ್ವಿರಾಜ್‌ಗೆ ಐದು ವರ್ಷ ಜೈಲು, ಮತ್ತು 7000 ರೂ. ದಂಡ, 2 ನೇ ಆರೋಪಿ ಪುಷ್ಪಾ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 4000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಚನ್ನಗಿರಿ ಅಜ್ಜಿಹಳ್ಳಿ ವಾಸಿಯಾದ ಆರೋಪಿ ಪೃಥ್ವಿರಾಜ್ ಶಿವಮೊಗ್ಗ ಗೋಪಿಶೆಟ್ಟಿಕೊಪ್ಪದ ಕೆ.ಹೆಚ್ ಬಿ ಕಾಲೋನಿಯ ನಿವಾಸಿ ರಂಜಿತಾರನ್ನು 2021 ರಲ್ಲಿ ಮದುವೆಯಾಗಿದ್ದರು. ಆತ ಮತ್ತು ಆತನ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಮಾಡಲಾಗಿತ್ತು.
ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಹಿಂಸೆ ಕೊಡುತ್ತಿದ್ದರಿಂದ ನನೊಂದ ರಂಜಿತಾ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಪಿ.ಐ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪಿಗಳಿಗೆ ಶಿಕ್ಷೆ
ಭದ್ರಾವತಿ ತಾಲೂಕಿನ ಮಾರುತಿನಗರ ಗ್ರಾಮದಲ್ಲಿ ಕೌಟುಂಬಿಕ ಜಗಳದ ವಿಚಾರವಾಗಿ ರಾಜಿ ಪಂಚಾಯತಿ ಸೇರಿದ್ದಾಗ ವೆಂಕಟೇಶ ಗೌಡ ಎಂಬವರ ಮೇಲೆ ಮೂವರು ಆರೋಪಿಗಳು 2021 ರಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಆರೋಪಿಗಳ ವಿರುದ್ಧ ಆರೋಪ ಧೃಡಪಟ್ಟ ಹಿನ್ನೆಲೆ ಎ1 ಆರೋಪಿ ಮಾರುತಿನಗರ ಗ್ರಾಮದ ಕಿರಣ್ ಗೌಡಗೆ ಮೂರು ವರ್ಷ ಜೈಲು ಹಾಗೂ 36 ಸಾವಿರ ದಂಡ, ಎ2 ಆರೋಪಿ ಮಾರುತಿನಗರದ ಮೀನಾಕ್ಷಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಎ 3 ಆರೋಪಿ ಬೆಂಗಳೂರಿನ ಕಲಾವತಿ ಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿ ಭದ್ರಾವತಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿದ್ದಾರೆ.


