ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಮಾದರಿಯಾಗಿವೆ. ಈ ಗ್ಯಾರಂಟಿಗಳಿಗೆ ವರ್ಷಕ್ಕೆ ಅರವತ್ತು ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಐದು ವರ್ಷಕ್ಕೆ ಮೂರು ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಸಾಕಷ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಆದರೆ ಅವರು ಯಾರೂ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂತಹ ಮಹತ್ವದ ಅಭೂತಪೂರ್ವ ಗ್ಯಾರಂಟಿಗಳನ್ನು ಜಾರಿ ಮಾಡಿ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇಂತಹ ವಿಶಿಷ್ಟ ಕಾರ್ಯಕ್ರಮ ಇಡೀ ವಿಶ್ವದಲ್ಲೇ ಇಲ್ಲ. ಗ್ಯಾರಂಟಿ ಮೂಲಕ ನಮ್ಮ ಸರ್ಕಾರ ಬಡವರ ಬದುಕನ್ನು ಬದಲಾಯಿಸಿದೆ. ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲ ವಾಗಿದೆ. ಇಂದು ಜೀವನ ನಡೆಸುವುದು ದುಬಾರಿ ಆಗಿದೆ. ಇಂತಹ ಸಂದರ್ಭದಲ್ಲಿ ಗ್ಯಾರಂಟಿಗಳು ಬಡವರಿಗೆ ಸಹಾಯ ಮಾಡುತ್ತಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾತ್ರೋರಾತ್ರಿ ನೋಟು ರದ್ದು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯಿತು. ಬಡವರ ಕೈಲಿದ್ದ ಹಣ ಎಲ್ಲ ಬ್ಯಾಂಕಿಗೆ ಹೋಯಿತು. ಮೂರು ಲಕ್ಷಕ್ಕೂ ಹೆಚ್ಚು ಕೋಟಿ ಕಪ್ಪು ಹಣ ಪತ್ತೆ ಹಚ್ಚಲಿಲ್ಲ. ಮೋದಿ ಅವರು ತಾವು ಅಧಿಕಾರಕ್ಕೆ ಬಂದರೆ ಹದಿನೈದು ದಿನದಲ್ಲಿ ಪ್ರತಿ ಭಾರತೀಯರ ಅಕೌಂಟ್‌ಗೆ ೧೫ ಲಕ್ಷ ಹಾಕ್ತಿನಿ ಎಂದು ಹೇಳಿದ್ದರು. ಅದು ಹಾಕಲಿಲ್ಲ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ಸ್ವದೇಶಕ್ಕೆ ತರ್ತಿವಿ ಅಂತ ಹೇಳಿದ್ದರು. ಅದು ತರಲಿಲ್ಲ. ನೂರು ದಿನದಲ್ಲಿ ರೈತರ ಸಾರಲ ಮನ್ನಾ ಮಾಡ್ತಿನಿ ಅಂದ್ರು ಅದೂ ಆಗಲಿಲ್ಲ. ರೈತರ ಆದಾಯ ದ್ವಿಗುಣ ಮಾಡ್ತಿನಿ ಅಂದರು. ಅದರ ಬಗ್ಗೆ ಈಗ ಮಾತನಾಡುತ್ತಾ ಇಲ್ಲ. ಬಡವರ ಹಣ ದ್ವಿಗುಣ ಆಗುವ ಬದಲು ಅಂಬಾನಿ, ಆದಾನಿ ಆದಾಯ ಹೆಚ್ಚಳವಾಗಿದೆ ಎಂದು ಕಿಡಿ ಕಾರಿದರು.
ನರೇಂದ್ರ ಮೋದಿ ಅವರ ಸರ್ಕಾರಿಂದ ಎರಡು ಲ್ಷಕಕ್ಕೂ ಹೆಚ್ಚು ಹಣ ರಾಜ್ಯಕ್ಕೆ ಬರಬೇಕಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ೭೨ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿತು. ರಾಜ್ಯದಲ್ಲಿ ಎಂಟೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಿದೆವು. ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾಲರ್ ಬೆಲೆ ಹೆಚ್ಚಿದೆ. ಬಂಗಾರದ ಬೆಲೆ ಗಗನಕ್ಕೆ ಮುಟ್ಟಿದೆ. ಇಂಧನ ಬೆಲೆ ಸಹ ಆಕಾಶಕ್ಕೇರಿದೆ ಎಂದರು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನೋ ತತ್ವದಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಾ ಇದೆ. ಬಡವರ, ಜನರ ಹಣವನ್ನು ಜನರಿಗೆ ಗ್ಯಾರಂಟಿ ಮೂಲಕ ನೀಡುತ್ತಿದೆ. ಬಡವರ ಕೆಲಸ ಮಾಡುತ್ತಿದೆ . ಕೊಳೆಗೇರಿ ನಿರ್ಮೂಲನ ಮಂಡಳಿ ಉತ್ತಮವಾಗಿ ಕೆಲಸ ಮಾಡಿದೆ. ಇದರ ರೂವಾರಿಗಳಾಗಿ ಜಮೀರ್ ಅಹಮದ್ ಹಾಗೂ ಪ್ರಸಾದ ಅಬ್ಬಯ್ಯ ಅವರು ಮುಂಚೂಣಿಯಲ್ಲಿದ್ದಾರೆ. ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದಗಳು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.


