ಪ್ರಧಾನಿ ನರೇಂದ್ರ ಮೋದಿ 18ನೇ ರೋಜಗಾರ್ ಮೇಳದಲ್ಲಿ ದೇಶಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಂಡ 61,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ.
ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶದ 45 ವಿವಿಧ ಸ್ಥಳಗಳಲ್ಲಿ ಭಾಗವಹಿಸಿದ್ದ ಯುವಕರತಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ರೋಜಗಾರ್ ಮೇಳದಲ್ಲಿ ಇದುವರೆಗೆ 11 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದಿನ ಕಾರ್ಯಕ್ರಮದಲ್ಲಿ ವಿತರಿಸಲಾದ ನೇಮಕಾತಿಗಳು ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಮಂತ್ರಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿವೆ ಎಂದರು.
ವಿಶೇಷವಾಗಿ ಗೃಹ ಸಚಿವಾಲಯ ಮತ್ತು ಅರೆಸೇನಾ ಪಡೆಗಳಿಗೆ ಸಂಬಂಧಿಸಿದಂತೆ 49,200 ನೇಮಕಾತಿಗಳಿವೆ ಎಂದು ತಿಳಿಸಿದರು. ಮಹಿಳಾ ಕಾನ್‌ಸ್ಟೇಬಲ್ ನೇಮಕಾತಿ ದೊಡ್ಡ ಸಂಖ್ಯೆಯಲ್ಲಿ ನಡೆದಿದ್ದು, ಕಳೆದ 11 ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಿದ ಸಕ್ರಿಯ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಈ ನೇಮಕಾತಿಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಹ್ವಾನ ಎಂದು ವರ್ಣಿಸಿದ ಮೋದಿ, ಉದ್ಯೋಗ ಸೃಷ್ಟಿಗೆ ಸರ್ಕಾರದ ಬದ್ಧತೆಯನ್ನು ಈ ಮೂಲಕ ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದರು. ದೇಶದ ಎಲ್ಲಾ ಭಾಗಗಳ ಯುವಕರು ಈ ಅವಕಾಶವನ್ನು ಪಡೆದಿದ್ದು, ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆಯು ಗಮನಾರ್ಹವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ, ಭಾರತವು ಆಧುನಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡಿದೆ. ಇದು ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಲಯದಲ್ಲಿಯೂ ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಉದ್ಯೋಗ ಮೇಳ 2023 ರಲ್ಲಿ ಪ್ರಾರಂಭವಾಯಿತು. ನಾನು ಇಂದು ನೋಡಿದ ಅಂಕಿಅಂಶಗಳ ಪ್ರಕಾರ, 40 ವಿವಿಧ ಸ್ಥಳಗಳಲ್ಲಿ 61,656 ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಪ್ರಧಾನಿ ಹೇಳಿದಂತೆ, ಇದು ಈಗ ಸಾಂಸ್ಥಿಕ ವೇದಿಕೆಯಾಗಿದೆ. ಅದು ತುಂಬಾ ತೃಪ್ತಿಕರವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ, ಭದ್ರತಾ ಪಡೆಗಳಲ್ಲಿ, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಇತರ ಇಲಾಖೆಗಳಲ್ಲಿಯೂ ಸಹ ಬಹಳಷ್ಟು ನೇಮಕಾತಿ ಪತ್ರಗಳನ್ನು ನೀಡಲಾಯಿತು ಎಂದು ತಿಳಿಸಿದರು.


